ಬಿಹಾರದ ನಿತೀಶ್ ಕುಮಾರ್ ಸರ್ಕಾರದ ಶಾಸಕ ರೈಲಿನಲ್ಲಿ ಸಹ ಪ್ರಯಾಣಿಕರ ಎದುರಲ್ಲೇ ಒಳ ಉಡುಪಿನಲ್ಲಿ ಓಡಾಡುವ ಮೂಲಕ ಮುಜುಗರ ತರಿಸಿದ್ದಾರೆ. ಜೆಡಿಯು ಶಾಸಕ ಗೋಪಾಲ್ ಮಂಡಲ್ ತೇಜಸ್ ರಾಜಧಾನಿ ಎಕ್ಸ್ಪ್ರೆಸ್ನ ಎಸಿ ಪ್ರಥಮ ದರ್ಜೆ ರೈಲಿನ ಬೋಗಿಯಲ್ಲಿ ಪಾಟ್ನಾದಿಂದ ದೆಹಲಿಗೆ ಪ್ರಯಾಣಿಸುವ ವೇಳೆ ಈ ರೀತಿ ವಿಚಿತ್ರವಾಗಿ ಕಾಣಿಸಿಕೊಂಡಿದ್ದಾರೆ.
ಬೋಗಿಯಲ್ಲಿದ್ದ ಇತರೆ ಪ್ರಯಾಣಿಕರು ಶಾಸಕರ ದುವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ್ರು ಹಾಗೂ ಇದರಿಂದ ವಾದ ವಿವಾದ ಕೂಡ ಉಂಟಾಯ್ತು. ಜಗಳ ಸಂಭಾಳಿಸಲು ರೈಲ್ವೆ ಪೊಲೀಸ್ ಪಡೆ ಹಾಗೂ ಟಿಸಿ ಮಧ್ಯ ಪ್ರವೇಶ ಮಾಡುವಂತಾಯ್ತು.
ರೈಲಿನ ಸಹ ಪ್ರಯಾಣಿಕರು ಶಾಸಕರ ದುವರ್ತನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪೊಲೀಸರು ಹಾಗೂ ಟಿಸಿಗಳು ಶಾಸಕ ಹಾಗೂ ಸಹ ಪ್ರಯಾಣಿಕರನ್ನು ಶಾಂತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಿಆರ್ಪಿಓ ರಾಜೇಶ್ ಕುಮಾರ್ ಹೇಳಿದ್ರು.
ಅಂದಹಾಗೆ ಶಾಸಕ ಮಂಡಲ್ ತಮ್ಮ ಹೊಟ್ಟೆ ಸರಿಯಿಲ್ಲದ ಕಾರಣ ರೈಲಿನಲ್ಲಿ ಈ ರೀತಿ ಓಡಾಡಿದ್ದಾಗಿ ಸಬೂಬು ನೀಡಿದ್ದಾರೆ.
ನಾನು ರೈಲನ್ನು ಹತ್ತಿದ್ದೆ. ನನಗೆ ವಿಪರೀತ ಹೊಟ್ಟೆ ಹಾಳಾಗಿತ್ತು. ಆದರೆ ನಾನು ಒಳ ಉಡುಪುಗಳನ್ನು ಧರಿಸಿದ್ದ. ನಾನೇನು ಸುಳ್ಳು ಹೇಳುತ್ತಿಲ್ಲ. ನಾನು ಅತಿಸಾರದಿಂದ ಬಳಲುತ್ತಿದ್ದೆ. ನನಗೆ ಪದೇ ಪದೇ ಶೌಚಾಲಯಕ್ಕೆ ಹೋಗಬೇಕಾದ ಅನಿವಾರ್ಯತೆ ಇತ್ತು. ಹೀಗಾಗಿ ನಾನು ಕುರ್ತಾ ಮತ್ತು ಪೈಜಾಮಾವನ್ನು ಕಳಚಿಟ್ಟಿದ್ದೆ. ಆದರೆ ಸಹ ಪ್ರಯಾಣಿಕರು ಇದಕ್ಕೆ ಅತಿಯಾಗಿ ಪ್ರತಿಕ್ರಯಿಸಿದ್ರು ಎಂದು ಶಾಸಕ ಮಂಡಲ್ ಹೇಳಿದ್ದಾರೆ.
ರೈಲಿನಲ್ಲಿ ಒಳ ಉಡುಪು ಧರಿಸಿ ಓಡಾಡುತ್ತಿರುವ ಶಾಸಕರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗುತ್ತಿದ್ದಂತೆಯೇ ಪ್ರತಿಪಕ್ಷ ಆರ್ಜೆಡಿ ಸಾರ್ವಜನಿಕ ಸ್ಥಳದಲ್ಲಿ ದುವರ್ತನೆ ತೋರಿದ ಶಾಸಕನ ವಿರುದ್ದ ನಿತೀಶ್ ಕುಮಾರ್ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.