ಬೆಂಗಳೂರು: ಬೆಂಗಳೂರಿನ ನೈಸ್ ರಸ್ತೆಯಲ್ಲಿ ಅತಿವೇಗದ ವಾಹನ ಚಾಲನೆಗೆ ಬ್ರೇಕ್ ಹಾಕಲು ಸಂಚಾರಿ ಪೊಲೀಸರು ಹೊಸ ಪ್ರಯೋಗ ಜಾರಿ ಮಾಡಿದ್ದಾರೆ.
ನೈಸ್ ರಸ್ತೆಯಲ್ಲಿ ಓವರ್ ಸ್ಪೀಡ್ ವಾಹನ ಚಾಲನೆ ಮಾಡುವವರ ಮೇಲೆ ನಿಗಾ ವಹಿಸಲು ಲೇಸರ್ ಟ್ರ್ಯಾಕ್ ಗನ್ ಅಳವಡಿಸಲಾಗಿದ್ದು, ಇದರ ಮೂಲಕ ಅತಿ ವೇಗದಲ್ಲಿ ವಾಹನ ಚಾಲನೆ ಮಾಡುವವರನ್ನು ಪತ್ತೆ ಮಾಡಲಾಗುತ್ತಿದೆ.
ಕಳೆದ ಒಂದು ವಾರದಿಂದ ಈ ಹೊಸ ಪ್ರಯೋಗ ಜಾರಿಗೆ ಬಂದಿದ್ದು, ಅತಿ ವೇಗವಾಗಿ ವಾಹನ ಓಡಿಸುವವರಿಗೆ 1000 ರೂ ದಂಡ ವಿಧಿಸಲಾಗುತ್ತಿದೆ.
ಲೇಸರ್ ಟ್ರ್ಯಾಕ್ ಗನ್ ಎಂಬುದು ವಾಹನಗಳು ಚಲಿಸುತ್ತಿರುವ ವೇಗವನ್ನು ಪತ್ತೆ ಮಾಡುವ ಸಾಧನವಾಗಿದೆ. ನೈಸ್ ರಸ್ತೆಯಲ್ಲಿ ಅಲ್ಲಲ್ಲಿ ವಾಹನ ಸವಾರರ ಗಮನಕ್ಕೆ ಬಾರದಂತೆ ಈ ಸಾಧನಗಳನ್ನು ಅಳವಡಿಸಲಾಗಿದೆ. ನಿಗದಿತ ಮಿತಿಗಿಂತ ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಿದರೆ ಅಂತಹ ವಾಹನಗಳನ್ನು ಲೇಜಸ್ ಟ್ರ್ಯಾಕ್ ಕ್ಯಾಪ್ಚರ್ ಮಾಡುತ್ತದೆ. ವಾಹನದ ನಂಬರ್ ನ್ನು ಡಿಟೆಕ್ಟ್ ಮಾಡಿ ಟೋಲ್ ಗೆ ತಕ್ಷಣ ಮಾಹಿತಿ ರವಾನಿಸುತ್ತದೆ. ವಾಹನದ ಫೋಟೋ ಹಾಗೂ ಗಾಡಿ ನಂಬರ್ ನ್ನು ಟೋಲ್ ಸಿಬ್ಬಂದಿಗಳಿಗೆ ವಾಟ್ಸಪ್ ಮೂಲಕ ಸಂದೇಶ ರವಾನಿಸಲಾಗುತ್ತದೆ. ಟೋಲ್ ಬಳಿ ವಾಹನದ ವೇಗ್ ಕಡಿಮೆಯಾಗುತ್ತಿದ್ದಂತೆ ಪೊಲೀಸರು ವಾಹನವನ್ನು ತಡೆದು ದಂಡ ವಿಧಿಸುತ್ತಾರೆ.