ಇತ್ತೀಚೆಗೆ ಪ್ರಾಂಕ್ ಮಾಡುವವರ ಸಂಖ್ಯೆ ಹೆಚ್ಚಾಗ್ತಿದೆ. ಪ್ರಾಂಕ್ ಸ್ಟಾರ್ ಗಳು ಪ್ರಾಂಕ್ ಮಾಡಲು ಯಾವ ಮಟ್ಟಕ್ಕಾದರೂ ಹೋಗುತ್ತಾರೆ ಎಂದು ಆಗಾಗ ಕೇಳುತ್ತಿರುತ್ತೇವೆ. ಆದರೆ ಇಲ್ಲೊಬ್ಬ ಒಂದು ಮ್ಯಾಗಜ಼ೈನ್ ಏಜೆನ್ಸಿಯನ್ನೆ ಪ್ರಾಂಕ್ ಮಾಡಿದ್ದಾನೆ.
ಯುನೈಟೆಡ್ ಕಿಂಗ್ಡಮ್ ನ ಸಾಪ್ತಾಹಿಕ ಮ್ಯಾಗಜ಼ೈನ್ ಒಂದು, ಮಕ್ಕಳು ಮೊದಲ ಬಾರಿ ಹಿಮದೊಂದಿಗೆ ಆಡಿದಾಗ ಅವರ ಭಿನ್ನ ವಿಭಿನ್ನ ರಿಯಾಕ್ಷನ್ ಫೋಟೊಗಳನ್ನ ತಮ್ಮ ವೀಕ್ಲಿಯಲ್ಲಿ ಪಬ್ಲಿಶ್ ಮಾಡಿದೆ. ಇದರಲ್ಲಿ ರಷ್ಯಾದ ಸೋಷಿಯಲ್ ಮೀಡಿಯಾ ಸ್ಟಾರ್ ಹಸಬುಲ್ಲಾ ಮಾಗೊಮೆಡೋವ್ ಫೋಟೊ ಸಹ ಇರುವುದು ಟ್ವಿಟ್ಟರ್ ಬಳಕೆದಾರರ ಕಣ್ಣಿಗೆ ಬಿದ್ದಿದೆ.
ಮಕ್ಕಳ ಫೋಟೊಗಳನ್ನು ಕಳಿಸಿ ಎಂದರೆ ಯಾರೋ ಒಬ್ಬ ಹಸಬುಲ್ಲಾ ಕಳಿಸಿದ್ದಾನೆ ಎಂದು ಟ್ವಿಟ್ಟರ್ ಯೂಸರ್ ಒಬ್ಬರು ಟ್ವೀಟ್ ಮಾಡಿದ್ದರು. ಆ ಟ್ವೀಟ್ ಅಂತೂ ಎಲ್ಲೆಡೆ ವೈರಲ್ ಆಗಿದ್ದು, ಹಸಬುಲ್ಲಾ ಫೋಟೊ ಪಬ್ಲಿಶ್ ಮಾಡಿರುವ ಪತ್ರಿಕೆಯನ್ನೆ ಯಾರೋ ಪ್ರಾಂಕ್ ಮಾಡಿದ್ದಾರೆ ಎಂದು ಫನ್ನಿ ಮೀಮ್ಸ್ ಗಳನ್ನ ಟ್ವೀಟ್ ಮಾಡುತ್ತಿದ್ದಾರೆ.
ಇದಕ್ಕೆ ಕಾರಣ ಹಸಬುಲ್ಲಾ ತನ್ನ ಫನ್ನಿ ಟಿಕ್ ಟಾಕ್ ಗಳಿಂದ ಹಲವು ದೇಶಗಳಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಮೂಲತಃ ರಷ್ಯಾದವರಾಗಿರೊ ಹಸಬುಲ್ಲಾಗೆ ಈಗ 18 ವರ್ಷ ವಯಸ್ಸು, ಆದರೆ ಕುಬ್ಜತೆಯಿಂದ ಅವರು ಈಗಲೂ ಪುಟ್ಟ ಮಗುವಿನ ಹಾಗೆಯೇ ಕಾಣುತ್ತಾರೆ. ಮ್ಯಾಗಜ಼ೈನ್ ನಲ್ಲಿ ಅವರು ಹಿಮದಲ್ಲಿ ನಿಂತಿರುವ ಚಿತ್ರದ ಜೊತೆ ಅವರ ವಯಸ್ಸನ್ನ ಏಳು ವರ್ಷ ಎಂದು ಪ್ರಕಾಶಿಸಲಾಗಿದ್ದು, ಯಾರೋ ಮ್ಯಾಗಜ಼ೈನ್ ಅವ್ರನ್ನೆ ಟ್ರಿಕ್ ಮಾಡಿದ್ದಾರೆ ಎಂದು ಮೀಮ್ಸ್ ಗಳು ಆಗುತ್ತಿವೆ.
ಈ ವಿಷಯ ವೈರಲ್ ಆಗುತ್ತಿದ್ದಂತೆ, ಈ ಪ್ರಾಂಕ್ ಮಾಡಿದ್ದು ನಾನೇ ಎಂದು ವ್ಯಕ್ತಿಯೊಬ್ಬ ಮ್ಯಾಗಜ಼ೈನ್ ಗೆ ಕಳುಹಿಸಿದ ಈ ಮೇಲ್ ನ ಸ್ಕ್ರೀನ್ ಶಾಟ್ ಅನ್ನು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಹಸಬುಲ್ಲಾ ಅವರ ಫೋಟೊ ಇದ್ದು, ಅವರ ವಯಸ್ಸು ಏಳು ವರ್ಷ ಎಂದು ಉಲ್ಲೇಖಿಸಿದ್ದಾರೆ. ಜೊತೆಗೆ ಕಳೆದ ವಾರ ಮೊದಲ ಬಾರಿ ಹಸಬುಲ್ಲಾ ಹಿಮದೊಂದಿಗೆ ಆಟವಾಡಿದ್ದ ಎಂದು ಈಮೇಲ್ ಮಾಡಲಾಗಿದೆ. ಬಹುಶಃ ಪ್ರಕಾಶಕರಿಗೆ ಹಸಬುಲ್ಲಾನ ಬಗ್ಗೆ ತಿಳಿದಿಲ್ಲ ನೋಡಲು ಪುಟ್ಟ ಮಗುವಿನಂತೆಯೆ ಇರುವ ಅವರ ಫೋಟೊವನ್ನೇ ಪಬ್ಲಿಶ್ ಮಾಡಿ, ಈಗ ಮೀಮ್ ಮೆಟಿರಿಯಲ್ ಆಗಿದ್ದಾರೆ.