ಹೃದಯಾಘಾತ ಸದ್ಯ ಎಲ್ಲರ ಭಯಕ್ಕೆ ಕಾರಣವಾಗಿದೆ. ಸಣ್ಣದಾಗಿ ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡರೂ ಜನ ಆಸ್ಪತ್ರೆಗೆ ಓಡ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿ ಹೃದಯಾಘಾತಕ್ಕೊಳಗಾಗ್ತಿರುವವರ ಸಂಖ್ಯೆ ಹೆಚ್ಚಾಗಿರುವುದು ಇದಕ್ಕೆ ಕಾರಣವಾಗಿದೆ.
ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಜನರು ಹರಸಾಹಸ ಮಾಡ್ತಿದ್ದಾರೆ. ಈ ಮಧ್ಯೆ ಇಂಗ್ಲೆಂಡಿನ ಎಕ್ಸೆಟರ್ ವಿಶ್ವವಿದ್ಯಾನಿಲಯದ ಸಂಶೋಧಕರು, ಹೃದಯಾಘಾತ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೇಗೆ ಕಡಿಮೆ ಮಾಡಬಹುದು ಎಂಬುದನ್ನು ಹೇಳಿದ್ದಾರೆ.
ಸಂಶೋಧಕರ ಪ್ರಕಾರ ರಾತ್ರಿ 10 ರಿಂದ 11 ಗಂಟೆಯ ನಡುವೆ ನಿದ್ರೆ ಮಾಡುವುದರಿಂದ ಹೃದಯಾಘಾತ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು. ವಿಜ್ಞಾನಿಗಳು ಇದನ್ನು ಗೋಲ್ಡನ್ ಅವರ್ ಎಂದು ಕರೆಯುತ್ತಾರೆ. ಮನುಷ್ಯ ಮಲಗುವ ಸಮಯಕ್ಕೂ ಹೃದಯ ಸಂಬಂಧಿ ಕಾಯಿಲೆಗಳಿಗೂ ಸಂಬಂಧವಿದೆ ಎಂದು ಸಂಶೋಧಕರು ಹೇಳಿದ್ದಾರೆ.
ನಮ್ಮ ದೇಹ 24 ಗಂಟೆ ಕಾರ್ಯ ನಿರ್ವಹಿಸುತ್ತದೆ. ದೈಹಿಕ ಮತ್ತು ಮಾನಸಿಕ ಕಾರ್ಯಗಳನ್ನು ನಿರ್ವಹಿಸುತ್ತದೆ. ತಡವಾಗಿ ಮಲಗಿ ತಡವಾಗಿ ಏಳುವುದರಿಂದ ನಮ್ಮ ದೇಹದ ಗಡಿಯಾರಕ್ಕೆ ತೊಂದರೆಯಾಗುತ್ತದೆ. ಇದರಿಂದ ಹೃದಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಹಾಗಾಗಿ ಸಮಯಕ್ಕೆ ಸರಿಯಾಗಿ ನಿದ್ರೆ ಮಾಡುವುದು ಮುಖ್ಯ. 88,000 ಜನರ ಮೇಲೆ ಅಧ್ಯಯನ ನಡೆದಿದೆ. 43 ರಿಂದ 79 ವರ್ಷ ವಯಸ್ಸಿನವರ ಮೇಲೆ ಅಧ್ಯಯನ ನಡೆದಿದೆ. ಈ ಸಂಶೋಧನೆ 5.7 ವರ್ಷಗಳ ಕಾಲ ನಡೆಯಿತು. ಟ್ರ್ಯಾಕರ್ ಧರಿಸಿದ್ದ ಜನರಿಗೆ ಅನೇಕ ಪ್ರಶ್ನೆಗಳನ್ನು ಕೇಳಲಾಗಿತ್ತು.
5.7 ವರ್ಷಗಳ ಕಾಲ ನಡೆದ ಈ ಸಂಶೋಧನೆಯ ಫಲಿತಾಂಶದ ಪ್ರಕಾರ, ಶೇಕಡಾ 3.6ರಷ್ಟು ಜನರಿಗೆ ಹೃದ್ರೋಗವಿತ್ತು. ಅವರಲ್ಲಿ ಹೆಚ್ಚಿನವರು ರಾತ್ರಿ 11 ಗಂಟೆಯ ನಂತರ ಮಲಗುತ್ತಿದ್ದರು. ರಾತ್ರಿ 10 ರಿಂದ 11 ರ ನಡುವೆ ಮಲಗುವವರಲ್ಲಿ ಹೃದ್ರೋಗದ ಪ್ರಮಾಣ ಕಡಿಮೆಯಿತ್ತು.