ದೆಹಲಿ ರೈಲ್ವೆ ನಿಲ್ದಾಣವು ಪ್ರಯಾಣಿಕರಿಗೆ ವಿಮಾನ ನಿಲ್ದಾಣ ಮಾದರಿಯ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದೆ. ಪ್ರಯಾಣಿಕರ ಪ್ರಯಾಣವು ಸುಖಕರವಾಗಿರಲಿ ಎಂಬ ದೃಷ್ಠಿಯಿಂದ ಫ್ಲಾಟ್ಫಾರಂ ನಂಬರ್ 1ರಲ್ಲಿ ಐಆರ್ಸಿಟಿಸಿ ಎಕ್ಸಿಕ್ಯೂಟಿವ್ ಲಾಂಜ್ ನಿರ್ಮಾಣ ಮಾಡಿದೆ. ಇಲ್ಲಿ ಪ್ರಯಾಣಿಕರು ಏರ್ಪೋರ್ಟ್ನಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ಅನುಭವಿಸಲಿದ್ದಾರೆ.
ಮಸಾಜ್ ಚೇರ್ ವ್ಯವಸ್ಥೆ, ಸಂಗೀತ, ಬ್ಯುಸಿನೆಸ್ ಸೆಂಟರ್ ಸೌಲಭ್ಯ ಹೀಗೆ ಥೇಟ್ ವಿಮಾನ ನಿಲ್ದಾಣದಲ್ಲಿ ಸಿಗುವಂತೆ ಎಲ್ಲಾ ಸೌಲಭ್ಯಗಳು ಈ ಲಾಂಜ್ನಲ್ಲಿ ಸಿಗಲಿದೆ.
ಕಚೇರಿ ಕೆಲಸವನ್ನು ಮಾಡಬೇಕೆಂದು ಬಯಸುವ ಪ್ರಯಾಣಿಕರು ಬ್ಯುಸಿನೆಸ್ ಲಾಂಜ್ಗೆ ತೆರಳಿದ್ರೆ ಅಲ್ಲಿ ಅವರಿಗೆ ಇಂಟರ್ನೆಟ್ ಸೌಲಭ್ಯ ಹೊಂದಿರುವ ಕಂಪ್ಯೂಟರ್ಗಳು ಸಿಗಲಿದೆ.
ಟಿವಿ, ಇಂಟರ್ನೆಟ್, ವೈಫೈ ಈ ಎಲ್ಲಾ ಸೌಕರ್ಯಗಳನ್ನು ಹೊರತುಪಡಿಸಿ ಇಲ್ಲಿ ನಿಮಗೆ ತರಹೇವಾರಿ ಖಾದ್ಯಗಳು ಕೂಡ ಸಿಗಲಿದೆ. ಅಂದಹಾಗೆ ಈ ಎಲ್ಲಾ ಸೌಲಭ್ಯಗಳನ್ನು ಆನಂದಿಸಲು ಪ್ರಯಾಣಿಕರು ಹಣ ಖರ್ಚು ಮಾಡಬೇಕು.
ಮೊದಲ 1 ಗಂಟೆ ಅವಧಿಗೆ 150 ರೂಪಾಯಿ ಪ್ರವೇಶ ಶುಲ್ಕ, ಇದಾಗಿ ನಂತರದ ಪ್ರತಿ 1 ಗಂಟೆಗೆ ಹೆಚ್ಚುವರಿ 99 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. 24 ಗಂಟೆ ಅವಧಿಯಲ್ಲೂ ಪ್ರಯಾಣಿಕರಿಗೆ ಈ ಸೌಲಭ್ಯಗಳು ಸಿಗಲಿದೆ.