ದೇಶದಾದ್ಯಂತ ಇಂದಿನಿಂದ ಕೊರೊನಾ ಲಸಿಕೆ ಕುರಿತಂತೆ ಹೊಸ ಮಾರ್ಗಸೂಚಿ ಜಾರಿಗೆ ಬಂದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೂನ್ 7ರಂದು ಪ್ರಕಟಿಸಿರುವ ಮಾರ್ಗಸೂಚಿ ಇಂದಿನಿಂದ ಜಾರಿಗೆ ಬಂದಿದೆ. ಹೊಸ ಮಾರ್ಗಸೂಚಿ ಪ್ರಕಾರ, ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ಉಚಿತವಾಗಿ ಸಿಗಲಿದೆ.
ಎಲ್ಲ ಸರ್ಕಾರಿ ಆಸ್ಪತ್ರೆ ಹಾಗೂ ಲಸಿಕಾ ಕೇಂದ್ರಗಳಲ್ಲಿ ಕೊರೊನಾ ಲಸಿಕೆ ಉಚಿತವಾಗಿ ಸಿಗಲಿದೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಲಭ್ಯವಾಗಲಿದೆ. ಆದ್ರೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗೆ ಶುಲ್ಕ ಪಾವತಿ ಮಾಡಬೇಕಾಗುತ್ತದೆ.
ಹೊಸ ಮಾರ್ಗಸೂಚಿಯ ಪ್ರಕಾರ, ಕೇಂದ್ರ ಸರ್ಕಾರ ಲಸಿಕೆ ತಯಾರಿಸುವ ಕಂಪನಿಗಳಿಂದ ಶೇಕಡಾ 75 ರಷ್ಟು ಲಸಿಕೆ ಖರೀದಿಸಿ ರಾಜ್ಯಗಳಿಗೆ ಉಚಿತವಾಗಿ ನೀಡಲಿದೆ. ರಾಜ್ಯ ಸರ್ಕಾರಗಳು, ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕೆಲಸಗಾರರು ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಜನರಿಗೆ ಸರ್ಕಾರಿ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ನೀಡಲಿದೆ.
ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ಲಸಿಕೆ ನೀಡುವ ವಿಷ್ಯದಲ್ಲಿ ಯಾವ ಗುಂಪಿಗೆ ಆದ್ಯತೆ ನೀಡಬೇಕೆಂದು ರಾಜ್ಯ ಸರ್ಕಾರಗಳು ನಿರ್ಧರಿಸುತ್ತವೆ. ರಾಜ್ಯದ ಜನಸಂಖ್ಯೆ, ಕೊರೊನಾ ಪ್ರಕರಣ ಮತ್ತು ಲಸಿಕೆ ವ್ಯರ್ಥದ ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರಗಳಿಗೆ ನೀಡುವ ಲಸಿಕೆ ಪ್ರಮಾಣ ನಿರ್ಧರಿಸಲಾಗುವುದು.