ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಇಂದು ಮೊದಲ ಟಿ 20 ಪಂದ್ಯವನ್ನಾಡಲಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಮೈದಾನಕ್ಕಿಳಿಯಲಿದೆ. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಈಗಾಗಲೇ ಈ ಸರಣಿಯಿಂದ ಹೊರಗುಳಿದಿದ್ದಾರೆ. ಈ ನಡುವೆ ಟೀಂ ಇಂಡಿಯಾಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ನ್ಯೂಜಿಲೆಂಡ್‌ನ ವೇಗದ ಬೌಲರ್ ಸರಣಿಯಿಂದ ಹೊರ ಬಿದ್ದಿದ್ದಾರೆ.
ಭಾರತ ವಿರುದ್ಧ ಮುಂಬರುವ ಟೆಸ್ಟ್ ಸರಣಿಯತ್ತ ಗಮನಹರಿಸಲು ನ್ಯೂಜಿಲೆಂಡ್ ವೇಗಿ ಕೈಲ್ ಜೇಮಿಸನ್ ಮೂರು ಪಂದ್ಯಗಳ ಟಿ-20 ಸರಣಿಯಿಂದ ಹೊರಬಿದ್ದಿದ್ದಾರೆ. ನವೆಂಬರ್ 25 ರಿಂದ ಪ್ರಾರಂಭವಾಗುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ತಯಾರಿ ನಡೆಸಲು ಕೈಲ್, ಟಿ-20 ಪಂದ್ಯವನ್ನಾಡುತ್ತಿಲ್ಲ. ಈ ಟೆಸ್ಟ್ ಸರಣಿಯು ಹೊಸ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ನ ಮೊದಲ ಸರಣಿಯಾಗಿದೆ. ನ್ಯೂಜಿಲೆಂಡ್‌ನ ಕೋಚ್ ಗ್ಯಾರಿ ಸ್ಟೆಡ್, ಕೇನ್ ಮತ್ತು ಕೈಲ್ ಜೊತೆ ಮಾತನಾಡಿದ ನಂತರ ಸ್ಪಷ್ಟನೆ ನೀಡಿದ್ದಾರೆ.
ಈ ವರ್ಷ ಜುಲೈನಲ್ಲಿ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ಎಂಟು ವಿಕೆಟ್‌ಗಳಿಂದ ಭಾರತವನ್ನು ಸೋಲಿಸುವ ಮೂಲಕ ನ್ಯೂಜಿಲೆಂಡ್ ಮೊದಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದುಕೊಂಡಿತು.
ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತದ ಕೆಲ ಆಟಗಾರರು ಆಡ್ತಿಲ್ಲ. ಕೆಲ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಹೊರಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ನಿಂದಲೂ ಕೊಹ್ಲಿ ಹೊರಗುಳಿಯಲಿದ್ದಾರೆ.