ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಜೊತೆ ಸೆಲ್ಫಿ ತೆಗೆದುಕೊಂಡು ವೈರಲ್ ಆಗಿದ್ದ ಡ್ರಗ್ಸ್ ಪ್ರಕರಣದ ಸಾಕ್ಷಿದಾರ ಕೆ.ಸಿ. ಗೋಸಾವಿಯನ್ನು 2018 ರಲ್ಲಿ ಪುಣೆಯಲ್ಲಿ ದಾಖಲಾಗಿದ್ದ ವಂಚನೆ ಕೇಸ್ ನಲ್ಲಿ ಇದೀಗ ಬಂಧಿಸಲಾಗಿದೆ.
ತಮಗೆ ಜೀವ ಬೆದರಿಕೆಯಿದ್ದು ಹೀಗಾಗಿ ತಾನು ಪೊಲೀಸರಿಗೆ ಶರಣಾಗುತ್ತಿದ್ದೇನೆ ಎಂದು ಗೋಸಾವಿ ಹೇಳಿರುವ ಬೆನ್ನಲ್ಲೇ ಗೋಸಾವಿ ಹಳೆಯ ಪ್ರಕರಣವೊಂದರ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದಾರೆ.
ಡ್ರಗ್ಸ್ ಪ್ರಕರಣದ ಪ್ರಮುಖ ಸಾಕ್ಷಿ ಎನಿಸಿರುವ ಗೋಸಾವಿ, ಆರ್ಯನ್ ಖಾನ್ ಜೊತೆ ಕ್ಲಿಕ್ಕಿಸಿಕೊಂಡ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಇದೇ ಗೋಸಾವಿ ವ್ಯಕ್ತಿಯೊಬ್ಬರಿಗೆ ವಂಚಿಸಿದ ಆರೋಪದಲ್ಲಿ 2018ರಲ್ಲಿ ದಾಖಲಾದ ಪ್ರಕರಣವೊಂದರ ಸಂಬಂಧ ಜೈಲುಪಾಲಾಗಿದ್ದಾರೆ.
ಖಾಸಗಿ ತನಿಖೆದಾರನಾಗಿರುವ ಕೆ.ಪಿ. ಗೋಸಾವಿ ಮುಂಬೈ ಕ್ರೂಸ್ ದಾಳಿ ವೇಳೆ ಹಾಜರಿದ್ದನು. ಇದಾದ ಬಳಿಕ ಆರ್ಯನ್ ಖಾನ್ ಜೊತೆಗಿನ ಸೆಲ್ಫಿ ಹಾಗೂ ವಿಡಿಯೋಗಳು ವೈರಲ್ ಆಗಿದ್ದವು. ಇದಾದ ಬಳಿಕ ಎನ್ಸಿಬಿ ತನಿಖೆಯ ಮಾರ್ಗದ ಬಗ್ಗೆ ಶಿವಸೇನೆ ಮೈತ್ರಿಕೂಟಗಳು ಪ್ರಶ್ನೆ ಎತ್ತಿದ್ದವು.
ಗೋಸಾವಿ ಕೆಪಿಜಿ ಡ್ರೀಮ್ಸ್ ಸೊಲ್ಯೂಷನ್ ಎಂಬ ಕಂಪನಿಯನ್ನು ನಡೆಸಿದ್ದರು ಎನ್ನಲಾಗಿದೆ. ಈ ಕಂಪನಿಯ ಮೂಲಕ ವಿದೇಶದಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಉದ್ಯೋಗದ ಭರವಸೆ ನೀಡಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಕಂಪನಿಯ ಬಗ್ಗೆ ಪ್ರಚಾರವನ್ನು ಮಾಡಲಾಗಿತ್ತು.
ಮಲೇಷ್ಯಾದ ಹೋಟೆಲ್ ಒಂದರಲ್ಲಿ ಕೆಲಸ ಕೊಡೋದಾಗಿ ನಂಬಿಸಿ ನನ್ನಿಂದ 3.09 ಲಕ್ಷ ರೂಪಾಯಿಗಳನ್ನು ಗೋಸಾವಿ ಪಡೆದು ವಂಚಿಸಿದ್ದಾನೆ ಎಂದು ಆರೋಪಿಸಿ ಉದ್ಯೋಗಾಂಕ್ಷಿಯೊಬ್ಬರು ದೂರನ್ನು ದಾಖಲಿಸಿದ್ದರು.
ಆರ್ಯನ್ ಖಾನ್ ಪ್ರಕರಣದಲ್ಲೂ ಗೋಸಾವಿ ಅಂಗರಕ್ಷಕ ಎಂದು ಹೇಳಿಕೊಳ್ಳುತ್ತಿರುವ ಪ್ರಭಾಕರ್ ಸೈಲ್, ಗೋಸಾವಿ ವಿರುದ್ಧ ಲಂಚದ ಆರೋಪ ಮಾಡಿದ್ದಾರೆ. 18 ಕೋಟಿ ರೂಪಾಯಿ ಲಂಚವನ್ನು ಶಾರೂಕ್ ಖಾನ್ರಿಂದ ಪಡೆಯಲು ಗೋಸಾವಿ ಮುಂದಾಗಿದ್ದ. ಇದರಲ್ಲಿ 8 ಕೋಟಿ ರೂಪಾಯಿ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆಗೆ ಸೇರುವುದಿತ್ತು ಎಂದು ಆರೋಪಿಸಿದ್ದರು.