ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಹಾಗೂ ಎನ್ಸಿಪಿ ನಾಯಕ ನವಾಬ್ ಮಲ್ಲಿಕ್ ನಡುವೆ ಆರೋಪ – ಪ್ರತ್ಯಾರೋಪಗಳ ಸುರಿಮಳೆ ಮುಗಿಯುವಂತೆ ಕಾಣುತ್ತಿಲ್ಲ. ದೇವೇಂದ್ರ ಫಡ್ನವಿಸ್ ಭೂಗತ ಲೋಕದ ಜೊತೆ ನಂಟು ಹೊಂದಿದ್ದಾರೆ ಎಂದು ನವಾಬ್ ಮಲ್ಲಿಕ್ ಆರೋಪಿಸಿದ್ದಾರೆ.
ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಸಮೀರ್ ವಾಂಖೆಡೆಯನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ ಎಂದು ನವಾಬ್ ಮಲ್ಲಿಕ್ ಹೊಸ ಬಾಂಬ್ ಸಿಡಿಸಿದ್ದಾರೆ. ದೇವೇಂದ್ರ ಫಡ್ನವಿಸ್ ರಾಜಕೀಯ ಶಕ್ತಿಯನ್ನು ಬಳಸಿಕೊಂಡು ಸಾಕಷ್ಟು ಅಪರಾಧಗಳನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ. ನೋಟು ಅಮಾನ್ಯೀಕರಣಗೊಂಡ ಬಳಿಕ ಕಂದಾಯ ಇಲಾಖೆ ಬಿಕೆಸಿ ಮೇಲೆ ದಾಳಿ ನಡೆಸಿ 14.56 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿತ್ತು. ಆದರೆ ಆಗ ಮಹಾರಾಷ್ಟ್ರ ಸಿಎಂ ಆಗಿದ್ದ ಫಡ್ನವಿಸ್ ತಮ್ಮ ಪ್ರಭಾವವನ್ನು ಬಳಸಿ ಈ ಪ್ರಕರಣ ಮುಚ್ಚಿ ಹಾಕಿದ್ರು ಎಂದು ಆರೋಪಿಸಿದ್ರು.
ಸಮೀರ್ ವಾಂಖೆಡೆ ಹಾಗೂ ದೇವೇಂದ್ರ ಫಡ್ನವಿಸ್ ನಡುವಿನ ಸ್ನೇಹದಿಂದಾಗಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಂಬೈ ಹಾಗೂ ಮಹಾರಾಷ್ಟ್ರದಲ್ಲಿ ಸಾಕಷ್ಟು ಅಪರಾಧ ಚಟುವಟಿಕೆಗಳು ಮುಚ್ಚಿ ಹೋಗಿವೆ ಎಂದು ಆರೋಪಿಸಿದ್ರು.
ಅಲ್ಲದೇ ಐಆರ್ಎಸ್ ಅಧಿಕಾರಿ ಸಮೀರ್ ವಾಂಖೆಡೆ ಅದು ಹೇಗೆ ಕಳೆದ 14 ವರ್ಷಗಳಿಂದ ಮುಂಬೈನಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ರು. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್ನ ಸದಸ್ಯನಾಗಿದ್ದ ರಿಯಾಜ್ ಭಾಟಿ ವಿಮಾನ ನಿಲ್ದಾಣದಲ್ಲಿ ಡಬಲ್ ಪಾಸ್ಪೋರ್ಟ್ ಹೊಂದಿದ ಕಾರಣಕ್ಕೆ ಸಿಕ್ಕಿಬಿದ್ದಿದ್ದನು. ಆದರೆ ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಭಾಟಿ, ದೇವೇಂದ್ರ ಫಡ್ನವಿಸ್ ಜೊತೆ ಸಾಕಷ್ಟು ಫೊಟೋಗಳಲ್ಲೂ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಪ್ರಧಾನಿ ಮೋದಿ ಹಾಜರಿದ್ದ ಕಾರ್ಯಕ್ರಮಗಳಲ್ಲೂ ಭಾಟಿ ಕಾಣಿಸಿಕೊಂಡಿದ್ದ ಎಂದು ಹೇಳಿದ್ರು.