ಪಾಕಿಸ್ತಾನದ ಕರ್ತಾರ್‌ಪುರ ಗುರುದ್ವಾರಕ್ಕೆ ಸಿಧು ಭೇಟಿ 20-11-2021 5:07PM IST / No Comments / Posted In: Latest News, India, Live News ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಪಾಕಿಸ್ತಾನದ ಕರ್ತಾರ್‌ಪುರದಲ್ಲಿರುವ ಗುರುದ್ವಾರ ದರ್ಬಾರ್ ಸಾಹಿಬ್‌ಗೆ ಭೇಟಿ ನೀಡಿದ್ದಾರೆ. ಈ ವೇಳೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಹಿರಿಯ ಸಹೋದರ ಎಂದು ಕರೆಯುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ. ಗುರುವಾರ ಗುರುದ್ವಾರಕ್ಕೆ ಭೇಟಿ ನೀಡಿದ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಚನ್ನಿ ನೇತೃತ್ವದ ಜಾಥಾದಿಂದ ಸಿಧು ಅವರನ್ನು ಹೊರಗಿಟ್ಟ ನಂತರ ಕರ್ತಾರ್‌ಪುರಕ್ಕೆ ಸಿಧು ಭೇಟಿ ನೀಡಿದ್ದಾರೆ. ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ್ ಅವರ ಅಂತಿಮ ವಿಶ್ರಾಂತಿ ಸ್ಥಳವಾದ ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್‌ನಲ್ಲಿ ಸಿಧು ನಮನ ಸಲ್ಲಿಸಿದ್ದಾರೆ. ನಂತರ ಅವರು ಲಾಂಗಾರ್ ಆಹಾರವನ್ನು ಸವಿದಿದ್ದಾರೆ. 2019 ರಲ್ಲಿ ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆಯಾದ ನಂತರ ಇದು ಕರ್ತಾರ್‌ಪುರಕ್ಕೆ ಸಿಧು ಅವರ ಎರಡನೇ ಭೇಟಿಯಾಗಿದೆ. ಶನಿವಾರ ಮುಂಜಾನೆ ಕರ್ತಾರ್‌ಪುರಕ್ಕೆ ಆಗಮಿಸಿದ ನಂತರ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಹಿರಿಯ ಸಹೋದರ ಎಂದು ಕರೆಯುವುದರ ಮೂಲಕ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. 4.7 ಕಿ.ಮೀ ದೂರದ ಕರ್ತಾರ್‌ಪುರ ಕಾರಿಡಾರ್ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಡೇರಾ ಬಾಬಾ ನಾನಕ್ ದೇಗುಲವನ್ನು ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್‌ನೊಂದಿಗೆ ಸಂಪರ್ಕಿಸುತ್ತದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಸಿಖ್ ತೀರ್ಥಯಾತ್ರೆಯನ್ನು ಮಾರ್ಚ್ 2020 ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಸಿಖ್ ಯಾತಾರ್ಥಿಗಳಿಗಾಗಿ ಮತ್ತೆ ತೆರೆಯಲಾಗಿದೆ. ಇದಕ್ಕೂ ಮೊದಲು, ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರವು ಉಭಯ ದೇಶಗಳ ನಡುವಿನ ಸಿಖ್ ಯಾತ್ರಾಸ್ಥಳಕ್ಕೆ ಕಾರಿಡಾರ್ ತೆರೆಯುವಲ್ಲಿ ಸಿಧು ಅವರ ಪಾತ್ರಕ್ಕಾಗಿ ಶ್ಲಾಘಿಸಿತ್ತು.