ನಾಸಾದ ಜೆಟ್ ಪ್ರೋಪಲ್ಕ್ಷನ್ ಲ್ಯಾಬೋರೇಟರಿಯು ಭೂಮಿಯಿಂದ ಕೇವಲ 1.7 ಮಿಲಿಯನ್ ಕಿಲೋಮೀಟರ್ ದೂರದಲ್ಲಿ ಹಾದು ಹೋಗುತ್ತಿರುವ ಕ್ಷುದ್ರಗಹವನ್ನು ಪತ್ತೆ ಮಾಡಿದೆ. ಇದು ಭೂಮಿಯ ಸಮೀಪ ಹಾದು ಹೋಗುವ 1000ನೇ ಕ್ಷುದ್ರಗ್ರಹವಾಗಿದೆ ಎಂದು ನಾಸಾ ಹೇಳಿದೆ.
ಈ ಕ್ಷುದ್ರಗ್ರಹವು ಭೂಮಿಗೆ ಯಾವುದೇ ಹಾನಿ ಮಾಡುವ ಸಾಧ್ಯತೆ ಇಲ್ಲ ಎನ್ನಲಾಗಿದೆಯಾದರೂ ಅದರ ಸಣ್ಣ ಗಾತ್ರದಿಂದಾಗಿ ಈ ಕ್ಷುದ್ರಗ್ರಹವನ್ನು ಟ್ರ್ಯಾಕ್ ಮಾಡುವುದು ಕಷ್ಟದ ಕೆಲಸವಾಗಿ ಪರಿಣಮಿಸಿದೆ.
ರಾಡಾರ್ನ ಪ್ರಾಥಮಿಕ ವೀಕ್ಷಣೆಯ ಪ್ರಕಾರ ಇದು 65ರಿಂದ 100 ಅಡಿ ಅಗಲ ಇರಬಹುದು ಎಂದು ಅಂದಾಜಿಸಲಾಗಿದೆ. ಇದು ಇಷ್ಟು ಸಣ್ಣ ಕ್ಷುದ್ರಗ್ರಹ ಆಗಿದ್ದರೂ ಸಹ ಭೂಮಿಗೆ ಸಮೀಪಿಸುತ್ತಿರುವ 1000ನೇ ಕ್ಷುದ್ರಗ್ರಹವಾಗಿರುವುದರಿಂದ ಇತಿಹಾಸದ ಪುಟಗಳಲ್ಲಿ ನಮೂದಾಗಲಿದೆ.
ಇದಾಗಿ 7 ದಿನಗಳ ಬಳಿಕ 1001ನೇ ಕಾಯವೊಂದು ಭೂಮಿಗೆ ಸಮೀಪಿಸಲಿದೆ ಎಂದೂ ಜೆಟ್ ಪ್ರೊಲ್ಶನ್ ಲ್ಯಾಬೋರೇಟರಿ ಹೇಳಿದೆ. ಆದರೆ ಇದು ಗಾತ್ರದಲ್ಲಿ ದೊಡ್ಡದಾಗಿ ಇರಲಿದೆ. ಇದು ಭೂಮಿಯಿಂದ 3.4 ಮಿಲಿಯನ್ ಕಿಲೋಮೀಟರ್ನಿಂದ ಹಾದು ಹೋಗಲಿದೆ ಎನ್ನಲಾಗಿದೆ.
2021 ಪಿಜೆ 1 ಇಂದು ಸಣ್ಣ ಕ್ಷುದ್ರಗ್ರಹವಾಗಿದೆ. ಇದು ಭೂಮಿಯಿಂದ 1 ಮಿಲಿಯನ್ ಮೈಲಿ ದೂರದಲ್ಲಿ ಹಾದು ಹೋಗಿರುವುದರಿಂದ ಇದರ ವಿವರವಾದ ಚಿತ್ರಣವನ್ನು ರಾಡಾರ್ನಿಂದ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಅದರ ವೇಗ ಹಾಗೂ ನಿಖರತೆಯನ್ನು ಅಳೆಯುವಲ್ಲಿ ರಾಡಾರ್ ಯಶಸ್ವಿಯಾಗಿದೆ ಎಂದು ನಾಸಾದ ಕ್ಷುದ್ರಗ್ರಹ ಸಂಶೋಧನಾ ಕಾರ್ಯಕ್ರಮದ ಮೇಲ್ವಿಚಾರಕ ಲ್ಯಾನ್ಸ್ ಬೆನ್ನರ್ ಹೇಳಿದ್ದಾರೆ.