2014ರ ಮೇ 26ರಂದು ನಡೆದಿದ್ದ ಗಲಭೆ ಪ್ರಕರಣದ ತೀರ್ಪು ಹೊರಬಂದಿದ್ದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಒಟ್ಟು 134 ಜನರು ಖುಲಾಸೆಗೊಂಡಿದ್ದಾರೆ. ಸರ್ಕಾರಿ ನೌಕರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು ಹಾಗೂ ಪ್ರಚೋದನಕಾರಿ ಭಾಷಣದ ಆರೋಪವನ್ನು ಯತ್ನಾಳ್ ಎದುರಿಸುತ್ತಿದ್ದರು.
ಕೋರ್ಟ್ ಆದೇಶದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನ್ಯಾಯಾಲಯದಿಂದ ಒಳ್ಳೆಯ ನ್ಯಾಯವೇ ಸಿಕ್ಕಿದೆ. ಪ್ರಕರಣದಲ್ಲಿ ಭಾಗಿಯಾಗದೇ ಇದ್ದರೂ ಸಹ ಅನೇಕರನ್ನು ಇದರಲ್ಲಿ ಸಿಲುಕಿಸಲಾಗಿತ್ತು. ಅವರಿಗೂ ಇದರಿಂದ ನ್ಯಾಯ ಸಿಕ್ಕಿದೆ. ತೀರ್ಪು ಪ್ರಕಟಿಸಿದ ಕೋರ್ಟ್ಗೆ ಧನ್ಯವಾದ ಅರ್ಪಿಸುತ್ತೇನೆ. ಅಮಿತ್ ಶಾ ವರ್ಸಸ್ ಗುಜರಾತ್ ಸರ್ಕಾರಿ ಮಾದರಿಯಲ್ಲಿ ನಮ್ಮ ಕೇಸ್ ಬಿಡುಗಡೆಯಾಗಿದೆ. ಪೊಲೀಸರು ಹಾಕಿದ 2 ಕೇಸ್ಗಳ ತೀರ್ಪು ಇಂದು ಬಂದಿದೆ. ಇನ್ನೊಂದು ಕೇಸ್ ನ ತೀರ್ಪು ಇನ್ನೂ ಬರಬೇಕಿದೆ. ಅದು ಕೂಡ ಸಾಕ್ಷಿಗಳ ಹೇಳಿಕೆ ದಾಖಲಿಸಿದ ಬಳಿಕ ಬರಲಿದೆ ಎಂದು ಹೇಳಿದ್ರು.
ನಗರದ ಗಾಂಧಿಚೌಕ್ ಪೊಲೀಸರು ವಿಜಯಪುರ ನಗರ ಶಾಸಕ ಬಸನಗೌಡಪಾಟೀಲ್ ಯತ್ನಾಳ್ ಸೇರಿದಂತೆ 134 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಡಿ. ಜಯಂತಕುಮಾರ್ ಎಲ್ಲರೂ ನಿರ್ದೋಷಿಗಳು ಎಂದು ತೀರ್ಪು ಪ್ರಕಟಿಸಿದ್ದಾರೆ. ಪ್ರಧಾನಿ ಮೋದಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದ ವೇಳೆ ನಡೆದಿದ್ದ ಗಲಾಟೆಯಲ್ಲಿ ಎರಡು ಕೋಮುಗಳ ನಡುವೆ ಕಲ್ಲು ತೂರಾಟ ನಡೆದಿತ್ತು. ಗಲಭೆಯಲ್ಲಿ ಅನೇಕ ವಾಹನಗಳಿಗೆ ಬೆಂಕಿ ಕೂಡ ಹಚ್ಚಲಾಗಿತ್ತು.