ಬೆಂಗಳೂರು: ದೇಶದ 6 ರಾಜ್ಯಗಳಲ್ಲಿ ನಂದಿನಿ ಹಾಲಿನ ಮಾರುಕಟ್ಟೆ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದ್ದು, ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವ ಕರ್ನಾಟಕದ ನಂದಿನಿ ಹಾಲು ಹಾಗೂ ಉತ್ಪನ್ನಗಳು ದೇಶದ ಬೇರೆ ಬೇರೆರಾಜ್ಯಗಳಿಗೂ ವಿಸ್ತರಿಸಿದ್ದು ಕನ್ನಡಿಗರ ಹೆಮ್ಮೆಯಾಗಿದೆ.
ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಕನ್ನಡಿಗರ ಸ್ವಾಭಿಮಾನದ ಹೆಗ್ಗುರುತು ನಂದಿನಿ! ಕನ್ನಡಿಗರ ಹೆಮ್ಮೆಯ ನಂದಿನಿ ದೇಶದ ಅತ್ಯುತ್ತಮ ಹಾಲಿನ ಬ್ರ್ಯಾಂಡ್ ಆಗ್ತಿದೆ. ದೇಶದ 6 ರಾಜ್ಯಗಳಲ್ಲಿ ನಂದಿನಿ ಮಾರುಕಟ್ಟೆ ವ್ಯಾಪಿಸಿದ್ದು, ಹೊರ ರಾಜ್ಯದ ಜನತೆಗೂ ಫೇವರೇಟ್ ಮಿಲ್ಕ್ ಬ್ರ್ಯಾಂಡ್ ಆಗಿದೆ. ನಮ್ಮ ರೈತರ ಶ್ರಮದ ಫಲವಾಗಿರುವ ನಂದಿನಿ ಉತ್ಪನ್ನಗಳು ಹಳ್ಳಿಯಿಂದ ದಿಲ್ಲಿ ತಲುಪಿದೆ ಎನ್ನುವುದು ಪ್ರತೀ ಕನ್ನಡಿಗ ಎದೆ ತಟ್ಟಿ ಹೇಳಿಕೊಳ್ಳಬಹುದಾದ ಹೆಮ್ಮೆಯ ಸಂಗತಿ ಎಂದು ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಗೆ ಮಂಡ್ಯದಿಂದ ನಂದಿನಿ ಹಾಲು, ಉತ್ಪನ್ನಗಳು ಪೂರೈಕೆಯಾಗುತ್ತಿವೆ. ಮುಂಬೈಗೆ ತುಮಕೂರಿನಿಂದ ನಂದಿನಿ ಹಾಲು ಸಾಗಣೆಯಾಗುತ್ತಿದೆ. ಹೈದರಾಬಾದ್ ಗೆ ಹಾಸನದಿಂದ, ಚೆನ್ನೈ ಹಾಗೂ ಕೇರಳಕ್ಕೆ ಮೈಸೂರಿನಿಂದ , ಗೋವಾ ಹಾಗೂ ಪುಣೆಗೆ ಬೆಳಗಾವಿಯಿಂದ, ತಮಿಳುನಾಡು ನೀಲಗಿರಿ ಹಾಗೂ ಕೇರಳಕ್ಕೆ ಚಾಮರಾಜನಗರದಿಂದ, ಸೊಲ್ಲಾಪುರಕ್ಕೆ ಬೆಳಗಾವಿಯಿಂದ, ಮಹಾರಾಷ್ಟ್ರಕ್ಕೆ ವಿಜಯಪುರದಿಂದ ನಂದಿನಿ ಹಾಲು ಪೂರೈಕೆಯಾಗುತ್ತಿದೆ. ನಂದಿನಿ ಕ್ಷೀರಧಾರೆಯಿಂದ ತಿಂಗಳಿಗೆ 75 ಕೋಟಿ ವಹಿವಾಟು ನಡೆಯುತ್ತಿದೆ.