ಮೈಸೂರು: ಭಗ್ನ ಪ್ರೇಮಿಯೊಬ್ಬ ಪ್ರೇಯಸಿಗೆ ಚಾಕುವಿನಿಂದ ಇರಿದ ಘಟನೆ ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗಗನ್ ಇಂತಹ ಕೃತ್ಯವೆಸಗಿದ ಆರೋಪಿ ಎಂದು ಹೇಳಲಾಗಿದೆ. ಯುವತಿ ಹಾಗೂ ಗಗನ್ ಕೆಲವು ವರ್ಷಗಳಿಂದ ಪ್ರೀತಿಸಿದ್ದು, ಇತ್ತೀಚೆಗೆ ಆತನಿಂದ ಯುವತಿ ದೂರವಾಗಿದ್ದಳು ಎನ್ನಲಾಗಿದೆ. ಇವತ್ತು ಬೆಳಗ್ಗೆ ಮನೆ ಮುಂದೆ ಯುವತಿ ನಿಂತಿದ್ದ ಸಂದರ್ಭದಲ್ಲಿ ಗಗನ್ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಗಾಯಗೊಂಡಿರುವ ಯುವತಿಯನ್ನು ಕುವೆಂಪುನಗರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.