ಲಂಡನ್: ತನ್ನ ಸಹೋದ್ಯೋಗಿಗಳನ್ನು ಮೆಚ್ಚಿಸಲು 10 ನಿಮಿಷಗಳಲ್ಲಿ 12 ಎನರ್ಜಿ ಡ್ರಿಂಕ್ ಗಳನ್ನು ಕುಡಿದ ವ್ಯಕ್ತಿಯೊಬ್ಬ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾನೆ. ಜಾಹೀರಾತುಗಳಲ್ಲಿ ಸೆಲೆಬ್ರಿಟಿಗಳು ಕುಡಿಯುವ ಎನರ್ಜಿ ಡ್ರಿಂಕ್ ಅನ್ನು ತಾನೂ ಕುಡಿಯಲು ಹೋಗಿ ಎಡವಟ್ಟು ಆಗಿದ್ದು, ಇದೀಗ ಸಾವು-ಬದುಕಿನ ನಡುವೆ ವ್ಯಕ್ತಿ ಹೋರಾಟ ಮಾಡುತ್ತಿದ್ದಾನೆ.
ಇದು ನಡೆದಿರುವುದು ಲಂಡನ್ನಲ್ಲಿ. 36 ವರ್ಷದ ಗೇಮರ್ ರೆ ಆಸ್ಪತ್ರೆಗೆ ದಾಖಲಾಗಿದ್ದಾನೆ, ಒಂದೇ ಸಲಕ್ಕೆ ಎನರ್ಜಿ ಡ್ರಿಂಕ್ ಕುಡಿದಿರುವ ಈತನ ಅಂಗಾಂಗಗಳಿಗೆ ಭಾರಿ ಹಾನಿಯಾಗಿದೆ. ಇದರ ಬಗ್ಗೆ ವಿಡಿಯೋ ವೈರಲ್ ಆಗಿದೆ.
ಡಾ ಎಚ್‌ಸು ಕ್ಲಿನಿಕಲ್ ಫಾರ್ಮಸಿಸ್ಟ್ ಆಗಿದ್ದು, ಅವರು ಚುಬ್ಬೆಮು ಎಂಬ ಯುಟ್ಯೂಬ್ ಚಾನೆಲ್ ನಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ. 2.68 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿರುವ ಈ ಯುಟ್ಯೂಬ್ ಚಾನೆಲ್ನಲ್ಲಿ ಎಚ್ಸಿ ಅವರು ಎನರ್ಜಿ ಡ್ರಿಂಕ್ಸ್ ಒಂದೇ ಬಾರಿ ಕುಡಿದರೆ ಏನೆಲ್ಲಾ ಅನಾಹುತ ಆಗುತ್ತದೆ ಎಂಬ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ತನ್ನ ಸಹೋದ್ಯೋಗಿಗಳನ್ನು ಮೆಚ್ಚಿಸಲು 10 ನಿಮಿಷಗಳಲ್ಲಿ 12 ಎನರ್ಜಿ ಡ್ರಿಂಕ್‌ಗಳನ್ನು ಕುಡಿದ ನಂತರ ಗೇಮರ್ ರೇ ಅವರಿಗೆ ಹೊಟ್ಟೆ ನೋವು ಬಂದಿತು. ಸಾವು-ನೋವಿನ ನಡುವೆ ಬದುಕುವಂಥ ಸ್ಥಿತಿ ನಿರ್ಮಾಣವಾಯಿತು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬಹುಅಂಗಾಂಗಗಳು ವೈಫಲ್ಯವಾಗಿದೆ ಎಂದು ಎಚ್ಚರಿಕೆಯ ಮೂಲಕ ಡಾ.ಎಚ್‌ಸು ಮಾಹಿತಿ ನೀಡಿದ್ದಾರೆ.