ಡ್ರಗ್ಸ್ ಪ್ರಕರಣದಲ್ಲಿ ಲಂಚ ಸ್ವೀಕಾರದ ಆರೋಪ ಎದುರಿಸುತ್ತಿರುವ ಎನ್.ಸಿ.ಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ತನಿಖೆಗೆ ಮುಂಬೈ ಪೊಲೀಸರು ಎಸಿಪಿ ಮಟ್ಟದ ಅಧಿಕಾರಿಯನ್ನು ನೇಮಕ ಮಾಡಿದ್ದಾರೆ.
ವಾಂಖೆಡೆ ವಿರುದ್ಧ ಎದುರಾಗಿರುವ ಎಲ್ಲಾ ಆರೋಪಗಳ ತನಿಖೆಯನ್ನು ಈ ಅಧಿಕಾರಿ ನೋಡಿಕೊಳ್ಳಲಿದ್ದಾರೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ಮುಂಬೈನ ನಾಲ್ಕು ಪೊಲೀಸ್ ಠಾಣೆಗಳಲ್ಲಿ ವಾಂಖೆಡೆ ವಿರುದ್ಧ ವಿವಿಧ ಪ್ರಕರಣಗಳು ದಾಖಲಾಗಿವೆ.
ಪ್ರಕರಣದ ಸಾಕ್ಷಿದಾರರಲ್ಲಿ ಒಬ್ಬರಾದ ಕೆ.ಸಿ. ಗೋಸಾವಿ ಅವರ ಭದ್ರತಾ ಸಿಬ್ಬಂದಿ ಪ್ರಭಾಕರ್ ಸೈಲ್ ಎಂಬವರು ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ರನ್ನು ದೋಷಮುಕ್ತಗೊಳಿಸಲು ಶಾರೂಕ್ ಖಾನ್ ಮ್ಯಾನೇಜರ್ ಸಾಕ್ಷಿದಾರ ಗೋಸಾವಿಯ ಜೊತೆಯಲ್ಲಿ 18 ಕೋಟಿ ರೂಪಾಯಿ ಡೀಲ್ ಮಾಡಿಕೊಂಡಿದ್ದರು. ಇದರಲ್ಲಿ 8 ಕೋಟಿ ರೂಪಾಯಿ ವಾಂಖೆಡೆಗೆ ನೀಡುವ ಬಗ್ಗೆಯೂ ಮಾತುಕತೆ ನಡೆದಿತ್ತು ಎಂದು ಹೇಳಿದ್ದರು. ಪ್ರಭಾಕರ್ ಸೈಲ್ ಈ ಆರೋಪಗಳ ಬಳಿಕ ಪ್ರಕರಣ ರೋಚಕ ತಿರುವು ಪಡೆದುಕೊಂಡಿದೆ.
ವಾಂಖೆಡೆ ವಿರುದ್ಧ ಲಂಚಾವತಾರದ ಆರೋಪಗಳು ಎದುರಾಗುತ್ತಿದ್ದಂತೆಯೇ ಎನ್ಸಿಪಿ ನಾಯಕ ನವಾಬ್ ಮಲ್ಲಿಕ್, ಆರ್ಯನ್ ಖಾನ್, ಶಿವಸೇನೆ ನಾಯಕ ಸಂಜಯ್ ರಾವತ್ ಜೊತೆಯಲ್ಲಿ ಕೆ.ಸಿ. ಗೋಸಾವಿ ಮಾತುಕತೆಯ ಆಡಿಯೋವನ್ನು ರಿಲೀಸ್ ಮಾಡುವ ಮೂಲಕ ವಾಂಖೆಡೆ ವಿರುದ್ಧ ಹರಿಹಾಯ್ದಿದ್ದರು.
ಆದರೆ ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿರುವ ಸಮೀರ್ ವಾಂಖೆಡೆ, ಡ್ರಗ್ಸ್ ಪ್ರಕರಣದಲ್ಲಿ ಪ್ರಾಮಾಣಿಕ ತನಿಖೆ ನಡೆಯುವುದು ಕೆಲವರಿಗೆ ಬೇಕಾಗಿಲ್ಲ. ಹೀಗಾಗಿ ನನ್ನ ವಿರುದ್ಧ ಲಂಚಾವತಾರದ ಆರೋಪಗಳನ್ನು ಮಾಡುವ ಮೂಲಕ ತನಿಖೆಯ ದಿಕ್ಕನ್ನು ತಪ್ಪಿಸಲಾಗ್ತಿದೆ ಎಂದು ಕಿಡಿಕಾರಿದ್ದರು.