26 ವರ್ಷಗಳ ಹಿಂದೆ ಪ್ರಯಾಣಿಕನಂತೆ ನಟಿಸಿದ್ದ ವಿಜಿಲೆನ್ಸ್ ಸಿಬ್ಬಂದಿಗೆ ಆರು ರೂಪಾಯಿ ಚಿಲ್ಲರೆ ಹಿಂದಿರುಗಿಸಲು ವಿಫಲನಾಗಿ ತನಿಖಾ ತಂಡಕ್ಕೆ ಸಿಕ್ಕಿ ಬಿದ್ದಿದ್ದ ರೈಲ್ವೆ ಕ್ಲರ್ಕ್ ಒಬ್ಬರಿಗೆ ರಿಲೀಫ್ ನೀಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದ್ದು, ಆತನ ಅಮಾನತು ಆದೇಶವನ್ನು ಎತ್ತಿ ಹಿಡಿದಿದೆ.
ಪ್ರಕರಣದ ವಿವರ: ಮುಂಬೈನ ಕುರ್ಲಾ ಟರ್ಮಿನೆಸ್ ಜಂಕ್ಷನ್ ನಲ್ಲಿ ಟಿಕೆಟ್ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವರ್ಮಾ ಎಂಬವರು ಜನವರಿ 31, 2002 ರಂದು ಟಿಕೆಟ್ ಕೇಳಿಕೊಂಡು ಬಂದ ಪ್ರಯಾಣಿಕರೊಬ್ಬರಿಗೆ 6 ರೂಪಾಯಿ ಚಿಲ್ಲರೆ ಮರಳಿಸಿರಲಿಲ್ಲ.
ವಾಸ್ತವವಾಗಿ ಈ ಪ್ರಯಾಣಿಕ ರೈಲ್ವೆ ವಿಜಿಲೆನ್ಸ್ ತಂಡದ ಸದಸ್ಯನಾಗಿದ್ದು, ತಪಾಸಣೆ ಸಲುವಾಗಿ ಪ್ರಯಾಣಿಕನಂತೆ ನಟಿಸಿದ್ದ. ಈತ ಕುರ್ಲಾದಿಂದ ಅರೇ ಏರಿಯಕ್ಕೆ ಟಿಕೆಟ್ ಕೇಳಿದ್ದು, 500 ರೂಪಾಯಿ ನೋಟು ನೀಡಿದ್ದ. ಟಿಕೆಟ್ ದರ 214 ಪಡೆದು 286 ರೂಪಾಯಿಗಳನ್ನು ವರ್ಮಾ ಆ ಪ್ರಯಾಣಿಕನಿಗೆ ಮರಳಿಸಬೇಕಿತ್ತು. ಆದರೆ ಆತ 280 ರೂಪಾಯಿಗಳನ್ನು ಮಾತ್ರ ನೀಡಿದ್ದು, ಇದೇ ಸಂದರ್ಭದಲ್ಲಿ ವಿಜಿಲೆನ್ಸ್ ತಂಡ ದಾಳಿ ನಡೆಸಿತ್ತು.
ಈ ಸಂದರ್ಭದಲ್ಲಿ ರೈಲ್ವೆ ಕ್ಯಾಶ್ ನಲ್ಲಿ 58 ರೂಪಾಯಿ ಕಡಿಮೆ ಇದ್ದಿದ್ದು ಕಂಡುಬಂದಿತ್ತಲ್ಲದೆ, ಕ್ಲರ್ಕ್ ವರ್ಮಾ ಕುಳಿತಿದ್ದ ಹಿಂಬದಿ ಹೆಚ್ಚುವರಿ 450 ರೂಪಾಯಿ ಆಗಿತ್ತು. ಈ ಹಣ ಪ್ರಯಾಣಿಕರಿಗೆ ಚಿಲ್ಲರೆ ಮರಳಿಸಿದೆ ಅಕ್ರಮವಾಗಿ ಪಡೆದಿರುವುದು ಎಂದು ಗುರುತಿಸಿದ್ದ ವಿಜಿಲೆನ್ಸ್ ತಂಡ ಆತನನ್ನು ಅಮಾನತುಗೊಳಿಸುವಂತೆ ಶಿಫಾರಸ್ಸು ಮಾಡಿದ್ದು, ಅದರಂತೆ ಕ್ರಮಕೈಗೊಳ್ಳಲಾಗಿತ್ತು. ಇದನ್ನು ಪ್ರಶ್ನಿಸಿ ವರ್ಮ ನ್ಯಾಯಾಲಯದ ಮೆಟ್ಟಿಲೇರಿದ್ದು, 26 ವರ್ಷದ ಹಿಂದಿನ ಪ್ರಕರಣದಲ್ಲಿ ಕೊನೆಗೂ ಆತನಿಗೆ ರಿಲೀಫ್ ಸಿಕ್ಕಿಲ್ಲ.