ರೈಡ್ ಕ್ಯಾನ್ಸಲ್ ಮಾಡಿದ್ದಾರೆ ಎಂಬ ಒಂದೇ ಕಾರಣಕ್ಕೆ ಕೋಪಗೊಂಡ ಕ್ಯಾಬ್ ಚಾಲಕ ಮಹಿಳೆಗೆ ಅಶ್ಲೀಲ ವಿಡಿಯೋವನ್ನು ಕಳುಹಿಸಿದ ಆಘಾತಕಾರಿ ಘಟನೆಯು ಮುಂಬೈನಲ್ಲಿ ನಡೆದಿದೆ.
ಅಶ್ಲೀಲ ವಿಡಿಯೋ ಕಳುಹಿಸಿದ್ದು ಮಾತ್ರವಲ್ಲದೇ ಕ್ಯಾಬ್ ಚಾಲಕ ಮಹಿಳೆಗೆ ಬೆದರಿಕೆಯನ್ನೂ ಒಡ್ಡಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಅಕ್ಟೋಬರ್ 3ರಂದು ಈ ಘಟನೆ ನಡೆದಿದೆ. ದೂರುದಾರ ಮಹಿಳೆಯು ತನ್ನ ಪತಿ ಹಾಗೂ ಮಾವನಿಗಾಗಿ ಈ ಕ್ಯಾಬ್ ಬುಕ್ ಮಾಡಿದ್ದರು. ಆದರೆ ಕಾರಿನಲ್ಲಿ ಎಸಿ ಸೌಲಭ್ಯ ಇಲ್ಲದ ಹಿನ್ನೆಲೆಯಲ್ಲಿ ಬುಕ್ಕಿಂಗ್ ರದ್ದು ಮಾಡಿದ್ದರು.
ಇದಾದ ಮಾರನೇ ದಿನದಿಂದ ಮಹಿಳೆ ಹಾಗೂ ಅವರ ಪತಿಗೆ ವಿವಿಧ ಮೊಬೈಲ್ ಸಂಖ್ಯೆಯಿಂದ ಬೆದರಿಕೆ ಕರೆಗಳು ಬರಲು ಆರಂಭಿಸಿದ್ದವು. ಇದರಿಂದ ಬೇಸತ್ತಿದ್ದ ಮಹಿಳೆಯು ಎಲ್ಟಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರು ವಿಚಾರಣೆ ಆರಂಭಿಸುವ ವೇಳೆಗೆ ಆರೋಪಿಯು ಬಿಹಾರಕ್ಕೆ ತೆರಳಿದ್ದ. ಹೀಗಾಗಿ ಪೊಲೀಸ್ ತಂಡ ಬಿಹಾರಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದೆ. ಬಂಧಿತ ಆರೋಪಿಯನ್ನು ಉತ್ಸವ್ ಕುಮಾರ್ ಎಂದು ಗುರುತಿಸಲಾಗಿದೆ.