ಮುಂಬೈ ಬಿಜೆಪಿ ಅಧ್ಯಕ್ಷ ಮಂಗಲ್ ಪ್ರಭಾತ್ ಲೋಧಾ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನ ಭೇಟಿಯಾಗಿದ್ದು ಪಾಕಿಸ್ತಾನ ಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾರಿಗೆ ಸೇರಿದ ‘ಜಿನ್ನಾ ಹೌಸ್’ನ್ನು ಕಲೆ ಹಾಗೂ ಸಂಸ್ಕೃತಿಯ ಕೇಂದ್ರವಾಗಿ ಪರಿವರ್ತಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಮಂಗಳವಾರ ಅಮಿತ್ ಶಾರನ್ನ ಭೇಟಿಯಾಗಿರುವ ಶಾಸಕ ಲೋಧಾ ಬಹುಕಾಲದ ಬೇಡಿಕೆಯನ್ನ ಹೊಂದಿರುವ ಪತ್ರವನ್ನ ಅಮಿತ್ ಶಾರಿಗೆ ಹಸ್ತಾಂತರಿಸಿದ್ದಾರೆ.
ಅಮಿತ್ ಶಾರಿಗೆ ಹಸ್ತಾಂತರಿಸಿದ ಪತ್ರದ ಕುರಿತಂತೆ ಲೋಧಾ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ದಕ್ಷಿಣ ಮುಂಬೈನ ಮಲಬಾರ್ ಹಿಲ್ನ ಜನಪ್ರತಿನಿಧಿಯಾಗಿರುವ ಲೋಧಾರ ಈ ಕ್ಷೇತ್ರದಲ್ಲಿಯೇ ಜಿನ್ನಾ ಹೌಸ್ ಇದೆ.
ಜಿನ್ನಾ ಈ ಆಸ್ತಿಯಲ್ಲಿ ಹತ್ತು ವರ್ಷಗಳ ಕಾಲ ವಾಸ ಮಾಡಿದ್ದಾರೆ. ಅಲ್ಲದೇ ಅವರು ದೇಶದ ವಿಭಜನೆಗೆ ಸಂಚು ಹೂಡಿದವರಾಗಿದ್ದಾರೆ. ಇದೀಗ ಈ ಆಸ್ತಿ ಭಾರತಕ್ಕೆ ಸೇರಿದೆ. ಹೀಗಾಗಿ ಇದನ್ನ ಕಲಾ ಕೇಂದ್ರವನ್ನಾಗಿ ಪರಿವರ್ತಿಸಬೇಕು ಎಂದು ಬಿಜೆಪಿ ಮುಖಂಡ ಮನವಿ ಮಾಡಿದ್ದಾರೆ.
ಜಿನ್ನಾ ಹೌಸ್ 2.5 ಎಕರೆ ವಿಸ್ತೀರ್ಣದಲ್ಲಿ ವ್ಯಾಪಿಸಿದ್ದು ಮುಂಬೈನ ಅತೀ ದುಬಾರಿ ಪ್ರದೇಶಗಳಲ್ಲಿ ಒಂದಾಗಿದೆ.