ದೇಶದ ಮೊದಲ ಬುಲೆಟ್ ರೈಲು ಯೋಜನೆ ಅನುಷ್ಠಾನಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಬುಲೆಟ್ ರೈಲು ಓಡಾಟಕ್ಕೆ ಅಗತ್ಯವಾದ ಮೂಲ ಸೌಕರ್ಯದ ಕೆಲಸ ಒಂದು ಕಡೆ ನಡೆದರೆ, ಈ ರೈಲನ್ನು ಮುನ್ನೆಡೆಸುವ ಪೈಲೆಟ್ಗಳಿಗೆ ತರಬೇತಿಯೂ ಆರಂಭವಾಗಿದೆ.
ಭಾರತದ ಬುಲೆಟ್ ರೈಲಿನ ಚಾಲಕರು ವೇಗದ ರೈಲುಗಳನ್ನು ಹೇಗೆ ನಿರ್ವಹಿಸಬೇಕೆಂದು ತಿಳಿಯಲು ಜಪಾನ್ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ಸಿಮ್ಯುಲೇಟರ್ಗಳನ್ನು ಬಳಸಲಾಗುತ್ತಿದೆ.
ನ್ಯಾಷನಲ್ ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಅಧಿಕಾರಿಗಳ ಪ್ರಕಾರ, ತರಬೇತಿ ಸಿಮ್ಯುಲೇಟರ್ಗಳು ಚಾಲಕರು, ಕಂಡಕ್ಟರ್, ಬೋಧಕರು ಮತ್ತು ರೈಲು/ರೋಲಿಂಗ್ ಸ್ಟಾಕ್ ನಿರ್ವಹಣಾ ಕೆಲಸಗಾರರಿಗೆ ಹೈ-ಸ್ಪೀಡ್ ರೈಲು ಚಾಲನಾ ಥಿಯರಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಸಿಮ್ಯುಲೇಟರ್ಗಳಲ್ಲಿ, ಒಬ್ಬ ಚಾಲಕ ಮತ್ತು ಕಂಡಕ್ಟರ್ಗೆ ತರಬೇತಿಯನ್ನು ನಡೆಸುವುದು ಸೇರಿದಂತೆ ಗುಂಪು ತರಬೇತಿಯನ್ನು ಸಹ ನಡೆಸುವುದು ಕಾರ್ಯಸಾಧ್ಯವಾಗಲಿದೆ. ಎನ್ಎಚ್ಎಸ್ಆರ್ಸಿಎಲ್ ಗುಜರಾತ್ನ ವಡೋದರದಲ್ಲಿರುವ ಮುಂಬೈ& ಅಹಮದಾಬಾದ್ ಹೈ-ಸ್ಪೀಡ್ ರೈಲ್ ಕಾರಿಡಾರ್ನಲ್ಲಿ ತರಬೇತಿ ಉದ್ದೇಶಕ್ಕಾಗಿ ಎಚ್ಎಸ್ಆರ್ ರೈಲಿನ ತರಬೇತಿ ಸಿಮ್ಯುಲೇಟರ್ಗಳ ವಿನ್ಯಾಸ, ಉತ್ಪಾದನೆ, ಪೂರೈಕೆ ಮತ್ತು ಕಾರ್ಯಾರಂಭಕ್ಕಾಗಿ ಸ್ವೀಕಾರ ಪತ್ರವನ್ನು ನೀಡಿದೆ.
ತರಬೇತಿ ಉದ್ದೇಶಕ್ಕಾಗಿ ಮಾದರಿ ಟ್ರಾಕ್ ಈಗಾಗಲೇ ಸ್ಥಾಪಿಸಲಾಗಿದೆ. 201.21 ಕೋಟಿ ರೂ. ವೆಚ್ಚದಲ್ಲಿ ಜಪಾನ್ನ ಕಂಪನಿಗೆ ಪ್ಯಾಕೇಜ್ ನೀಡಲಾಗಿದೆ. ಸಿಮ್ಯುಲೇಟರ್ ಪೂರೈಕೆಯ ಅವಧಿಯು ಒಪ್ಪಂದದ ಪ್ರಾರಂಭದಿಂದ 28 ತಿಂಗಳುಗಳಾಗಿರುತ್ತವೆ.
ಈ ಪ್ಯಾಕೇಜ್ನ ವ್ಯಾಪ್ತಿಯಡಿಯಲ್ಲಿ ವಡೋದರಾದ ತರಬೇತಿ ಸಂಸ್ಥೆಯಲ್ಲಿ ಸಿಬ್ಬಂದಿ ತರಬೇತಿಗಾಗಿ ರೈಲು ಸೆಟ್ ಸಿಮ್ಯುಲೇಟರ್ ಮತ್ತು ತರಗತಿಯ ಮಾದರಿಯ ಎರಡು ರೀತಿಯ ಸಿಮ್ಯುಲೇಟರ್ಗಳನ್ನು ಅಳವಡಿಸಬೇಕು, ಇದನ್ನು ಹತ್ತು ಪ್ರಶಿಕ್ಷಣಾಥಿರ್ಗಳು ಮತ್ತು ಬೋಧಕರು ಬಳಸಬಹುದಾಗಿದೆ.
ಸರ್ಕಾರದ ಮಂಜೂರಾತಿ ಮತ್ತು ಭೂಸ್ವಾಧಿನ ವಿಳಂಬದಿಂದ ಮಹಾರಾಷ್ಟ್ರದಲ್ಲಿ ನೆನೆಗುದಿಗೆ ಬಿದ್ದಿದ್ದ ಬುಲೆಟ್ ರೈಲು ಯೋಜನೆ ಇದೀಗ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದರೊಂದಿಗೆ ವೇಗ ಪಡೆದುಕೊಂಡಿದೆ. ಬಹುತೇಕ ಎಲ್ಲಾ ಬಾಕಿ ಉಳಿದಿರುವ ತಡೆ ನಿವಾರಣೆಯಾಗುತ್ತಿದೆ.