ಬ್ಯಾಂಕ್ ಖಾತೆಗಳ ವಿಚಾರದಲ್ಲಿ ಎಷ್ಟು ಜಾಗರೂಕತೆಯಿಂದ ಇದ್ದರೂ ಕಡಿಮೆಯೇ.. ಸೈಬರ್ ಕಳ್ಳರು ಯಾವುದೇ ಸಮಯದಲ್ಲಿ ನಮ್ಮ ಖಾತೆಗಳಿಗೆ ಕನ್ನ ಹಾಕಿಬಿಡಬಹುದು. ಇದೇ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂತೆ ದಕ್ಷಿಣ ಮುಂಬೈನ ಕಫ್ ಪರೇಡ್ನ 80 ವರ್ಷದ ವೈದ್ಯರೊಬ್ಬರು ಸೈಬರ್ ವಂಚನೆಗೆ ಗುರಿಯಾಗಿದ್ದಾರೆ. ವೈದ್ಯರಿಂದ ಕೆವೈಸಿ ಮಾಹಿತಿ ಪಡೆದ ಸೈಬರ್ ವಂಚಕರು 2.99 ಲಕ್ಷ ರೂಪಾಯಿ ವಂಚಿಸಿದ್ದಾರೆ.
ಈ ಸಂಬಂಧ ಕಫ್ ಪರೇಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ ನವೆಂಬರ್ 8ರಂದು ನಿವೃತ್ತ ವೈದ್ಯನ ಮೊಬೈಲ್ಗೆ ಒಂದು ಸಂದೇಶ ಬಂದಿತ್ತು.
ಈ ಸಂದೇಶದಲ್ಲಿ , ‘ ಪ್ರಿಯ ಗ್ರಾಹಕರೇ, ನಿಮ್ಮ ಪೆಟಿಎಂ ಕೆವೈಸಿ ಅವಧಿ ಮೀರಿದೆ. ಹೀಗಾಗಿ ಇನ್ನು ಮುಂದಿನ 24 ಗಂಟೆಗಳಲ್ಲಿ ನಿಮ್ಮ ಪೇಟಿಎಂ ಖಾತೆ ಬ್ಲಾಕ್ ಆಗಲಿದೆ. ಇದಕ್ಕಾಗಿ ನೀವು 98******” ಸಂಖ್ಯೆಗೆ ಕರೆ ಮಾಡಿ ನಿಮ್ಮ ಕೆವೈಸಿ ಮಾಹಿತಿಯನ್ನು ನೀಡಿ ಎಂದು ಬರೆಯಲಾಗಿತ್ತು. ಕೂಡಲೇ ಈ ಸಂಖ್ಯೆಗೆ ಕರೆ ಮಾಡಿದ ನಿವೃತ್ತ ವೈದ್ಯನಿಗೆ ಎನಿ ಡೆಸ್ಕ್ ಮೂಲಕ ಕೆವೈಸಿ ಅಪ್ಡೇಟ್ ಮಾಡುವಂತೆ ಹೇಳಲಾಯ್ತು. ಎನಿ ಡೆಸ್ಕ್ ಅಪ್ಲಿಕೇಶನ್ ಮೂಲಕ ಮತ್ತೊಬ್ಬರು ನಿಮ್ಮ ಮೊಬೈಲ್ ಪರದೆ ಮೇಲೆ ಕಣ್ಣಿಡಬಹುದು. ಹೀಗಾಗಿ ವೈದ್ಯ ಒದಗಿಸಿದ ಎಲ್ಲಾ ಮಾಹಿತಿಗಳನ್ನು ನಮೂದಿಸಿಕೊಂಡ ಸೈಬರ್ ವಂಚಕರು ಹಣ ಪೀಕಿದ್ದಾರೆ.
ದೂರುದಾರ ನಿವೃತ್ತ ವೈದ್ಯ ಎಟಿಎಂ ಕಾರ್ಡ್ ಸಿವಿವಿ ಸಂಖ್ಯೆ ಸೇರಿದಂತೆ ಎಲ್ಲಾ ಮಾಹಿತಿಯನ್ನು ನೀಡಿ 2.99 ಲಕ್ಷ ರೂಪಾಯಿ ಪಂಗನಾಮ ಹಾಕಿಸಿಕೊಂಡಿದ್ದಾರೆ. ತಾವು ವಂಚನೆಗೊಳಗಾಗಿದ್ದು ತಿಳಿಯುತ್ತದ್ದಂತೆಯೇ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.