ಬೆಂಗಳೂರು: ವಿಧಾನಸೌಧಕ್ಕೆ ಬಂದರೂ ಸಚಿವರು ಸಿಗುವುದಿಲ್ಲ ಎಂದು ಆಡಳಿತ ಪಕ್ಷದ ಶಾಸಕರೇ ಅಸಮಾಧಾನ ಹೊರಹಾಕಿದ್ದಾರೆ. ಮೂಡಿಗೆರೆಯ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು, ಶಾಸಕರ ಕೈಗೆ ಸಚಿವರು ಸಿಗುತ್ತಿಲ್ಲ ಎಂದು ಗರಂ ಆಗಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ವಾರಕ್ಕೆ ಎರಡು ಸಲ ವಿಧಾನಸೌಧಕ್ಕೆ ಬಂದು ಶಾಸಕರ ಭೇಟಿಗೆ ಸಿಗುತ್ತಾರೆ. ಸಮಸ್ಯೆಯನ್ನೂ ಆಲಿಸುತ್ತಾರೆ. ಆದರೆ, ಸಚಿವರನ್ನು ಭೇಟಿಯಾಗುವುದೇ ಕಷ್ಟಸಾಧ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸಕರ ಸಮಸ್ಯೆಗಳ ನಿವಾರಣೆಗೆ ಸಚಿವರನ್ನು ಭೇಟಿಯಾಗಲು ಬಂದರೆ ಸಚಿವರೇ ಸಿಗುವುದಿಲ್ಲ. ಶಾಸಕರದೇ ಈ ರೀತಿಯಾದರೆ ಜನಸಾಮಾನ್ಯರ ಗತಿಯೇನು ಎಂದು ಪ್ರಶ್ನಿಸಿದ್ದಾರೆ. ಅಸಮರ್ಥ ಸಚಿವರನ್ನು ಕೂಡಲೇ ಬದಲಿಸಬೇಕೆಂದು ಅವರು ಒತ್ತಾಯಿಸಿದ್ದು, ಮುಖ್ಯಮಂತ್ರಿಗಳೇ ವಿಧಾನಸೌಧಕ್ಕೆ ಬಂದರೂ ಅನೇಕ ಸಚಿವರು ವಿಧಾನಸೌಧಕ್ಕೆ ಬಂದು ಶಾಸಕರ ಸಮಸ್ಯೆ ಆಲಿಸುತ್ತಿಲ್ಲ ಎಂದು ದೂರಿದ್ದಾರೆ.