ವರಿಷ್ಠರು ಹಾಗೂ ಸಂಘಟನೆ ಒಪ್ಪಿಗೆ ನೀಡಿದರೆ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುತ್ತೇನೆ ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಗೋಪಾಲಕೃಷ್ಣ ದೇವಾಲಯದ ಸಮುದಾಯ ಭವನ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಲು ಆಗಮಿಸಿದ್ದ ಬಿ.ವೈ. ರಾಘವೇಂದ್ರ ಈ ಹೇಳಿಕೆ ನೀಡಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರದಿಂದ ಸ್ಪರ್ಧೆ ಮಾಡುತ್ತೀರೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿ.ವೈ. ರಾಘವೇಂದ್ರ, ಯಡಿಯೂರಪ್ಪ ಹಾಗೂ ನಮ್ಮನ್ನು ಬಿಜೆಪಿ ಬೆಳೆಸಿದೆ. ಹೀಗಾಗಿ ಬಿಜೆಪಿ ನಮ್ಮ ಪಾಲಿಗೆ ತಾಯಿ ಇದ್ದಂತೆ. ಪಕ್ಷ ಹಾಗೂ ವರಿಷ್ಠರು ಒಪ್ಪಿಗೆ ನೀಡಿದರೆ ಖಂಡಿತವಾಗಿಯೂ ರಾಜ್ಯ ರಾಜಕಾರಣಕ್ಕೆ ಬರುತ್ತೇನೆ ಎಂದು ಹೇಳಿದರು.
9ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಹೋದವನ ಸ್ಥಿತಿ ಹೀಗಾಯ್ತು…..!
ಯಡಿಯೂರಪ್ಪ ಆಪ್ತರ ಮೇಲಿನ ದಾಳಿ ರಾಜಕೀಯ ಪ್ರೇರಿತ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಕ್ಕೂ ಪ್ರತಿಕ್ರಿಯೆ ನೀಡಿದ ರಾಘವೇಂದ್ರ, ಡಿಕೆಶಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ತಂದೆಯ ಆಪ್ತರ ಮೇಲೆ ನಡೆದಿರುವ ಐಟಿ ದಾಳಿ ರಾಜಕೀಯ ಪ್ರೇರಿತವಾಗಿಲ್ಲ. ತನಿಖಾ ದಳ ಪಾರದರ್ಶಕ ತನಿಖೆಯನ್ನೇ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಪಕ್ಷದಲ್ಲಿ ಯಡಿಯೂರಪ್ಪರನ್ನು ಕಡೆಗಣನೆ ಮಾಡಲಾಗುತ್ತಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೂ ಉತ್ತರಿಸಿದ ಬಿ.ವೈ. ರಾಘವೇಂದ್ರ, ಬಿಜೆಪಿ ಯಡಿಯೂರಪ್ಪರನ್ನು ಕಡೆಗಣಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ರು.