ಸ್ವಾರ್ಥದಿಂದಲೇ ಕೂಡಿರುವ ಇಂದಿನ ಪ್ರಪಂಚದಲ್ಲಿ ಕೆಲವರು ಮಾಡುವ ನಿಸ್ವಾರ್ಥ ಕಾರ್ಯಗಳಿಂದ ಮಾನವೀಯತೆ ಇನ್ನೂ ಇದೆ ಎಂಬುದನ್ನು ಸಾಬೀತುಪಡಿಸುತ್ತಿರುತ್ತದೆ. ಅಂತವುದೇ ಒಂದು ಕಾರ್ಯ ಮಧ್ಯಪ್ರದೇಶದಲ್ಲಿ ನಡೆದಿದ್ದು, ತಮ್ಮ 23 ವರ್ಷದ ಮೊಮ್ಮಗನ ಜೀವ ಉಳಿಸುವ ಸಲುವಾಗಿ 70 ವರ್ಷದ ವೃದ್ಧೆ ತನ್ನ ಪ್ರಾಣಾಪಾಯವನ್ನು ಲೆಕ್ಕಿಸದೆ ಕಿಡ್ನಿ ದಾನ ಮಾಡಿದ್ದಾರೆ.
ಈ ಘಟನೆ ಮಧ್ಯಪ್ರದೇಶದ ಸಿಹೋರಾದ ದಾಮೋದಲ್ಲಿ ನಡೆದಿದ್ದು, ವೃದ್ಧೆಯ 23 ವರ್ಷದ ಮೊಮ್ಮಗ ಕಳೆದ ಎರಡು ವರ್ಷಗಳಿಂದ ತೀವ್ರ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದ. ಇತ್ತೀಚೆಗೆ ಆತನ ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿದ್ದು ಹೀಗಾಗಿ ಬಡೇರಿಯಾದ ಮೆಟ್ರೋ ಪ್ರೈಮ್ ಹಾಸ್ಪಿಟಲ್ ಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು ಕಿಡ್ನಿ ಫೇಲ್ಯೂರ್ ಆಗಿದೆ ಎನ್ನುವುದನ್ನು ಕಂಡುಕೊಂಡರಲ್ಲದೇ ತಕ್ಷಣವೇ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಮಾಡಬೇಕೆಂದು ಹೇಳಿದ್ದಾರೆ.
ಕೂಡಲೇ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಮಾಡದಿದ್ದರೆ ಯುವಕನ ಜೀವಕ್ಕೆ ಅಪಾಯವಿದೆ ಎಂದು ವೈದ್ಯರು ಹೇಳಿದ್ದು, ಆಗ ವೃದ್ಧೆ, ಮೊಮ್ಮಗನಿಗೆ ತಾವು ಕಿಡ್ನಿ ದಾನ ಮಾಡುವುದಾಗಿ ಮುಂದೆ ಬಂದಿದ್ದಾರೆ. ಆದರೆ ಅವರ ವಯಸ್ಸಿನ ಕಾರಣಕ್ಕೆ ಕುಟುಂಬ ಸದಸ್ಯರು ಹಾಗೂ ವೈದ್ಯರು ಆರಂಭದಲ್ಲಿ ಇದಕ್ಕೆ ಸಮ್ಮತಿಸಿಲ್ಲ. ಆದರೆ ವೃದ್ಧೆ ಹಠ ಬಿಡದಾದಾಗ ಆಕೆಯ ಆರೋಗ್ಯ ಪರಿಸ್ಥಿತಿ ಅವಲೋಕಿಸಿದ ವೈದ್ಯರು ಕಿಡ್ನಿ ದಾನ ಮಾಡಲು ಸಮರ್ಥರಿದ್ದಾರೆ ಎಂದು ಹೇಳಿದ್ದಾರೆ.
ಅಂತಿಮವಾಗಿ ಬಡೇರಿಯಾದ ಮೆಟ್ರೋ ಪ್ರೈಮ್ ಹಾಸ್ಪಿಟಲ್ ವೈದ್ಯರುಗಳಾದ ಡಾ. ರಾಜೇಶ್ ಪಟೇಲ್ ಹಾಗೂ ಡಾ. ವಿಶಾಲ್ ದಾನವಾಗಿ ಪಡೆದ ವೃದ್ಧೆಯ ಒಂದು ಕಿಡ್ನಿಯನ್ನು ಯುವಕನಿಗೆ ಜೋಡಿಸಿದ್ದು ಈಗ ಇಬ್ಬರೂ ಸಹ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ. ಮೊಮ್ಮಗನಿಗಾಗಿ ವೃದ್ಧೆ ಮಾಡಿದ ಕಾರ್ಯಕ್ಕೆ ಈಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.