18 ತಿಂಗಳ ಪ್ರಾಯದ ಕಂದಮ್ಮನನ್ನು ತಾಯಿ ಮನಸೋ ಇಚ್ಛೇ ತಿಳಿಸಿದ್ದು ಈ ದೃಶ್ಯವನ್ನು ತಾನೇ ರೆಕಾರ್ಡ್ ಮಾಡಿದ ಅಮಾನವೀಯ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮಹಿಳೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ವಲ್ಲಿಪುರಂನ ವದಿವಜಗನ್ ಎಂಬಾತ 4 ವರ್ಷಗಳ ಹಿಂದೆ 22 ವರ್ಷದ ತುಳಸಿ ಎಂಬಾಕೆಯನ್ನು ವಿವಾಹವಾಗಿದ್ದ. ಈ ದಂಪತಿ ತಮಿಳುನಾಡಿನ ಮೊಟ್ಟುರು ಗ್ರಾಮದಲ್ಲಿ ನೆಲೆಸಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಆದರೆ ವದಜಗನ್ ಹಾಗೂ ತುಳಸಿ ದಾಂಪತ್ಯದಲ್ಲಿ ಪದೇ ಪದೇ ಬಿರುಕು ಮೂಡುತ್ತಿತ್ತು. ಹೀಗಾಗಿ ತುಳಸಿಯನ್ನು ಪತಿ ಆಂಧ್ರಪ್ರದೇಶದಲ್ಲಿರುವ ಆಕೆಯ ತವರು ಮನೆಗೆ ಬಿಟ್ಟು ಬಂದಿದ್ದ.
ಮಗುವಿಗೆ ಮನಬಂದಂತೆ ಥಳಿಸುತ್ತಿರುವ ವಿಡಿಯೋ ನೋಡಿದ ಸಂಬಂಧಿಗಳು ಕೂಡಲೇ ಆಕೆಯ ಪತಿಗೆ ಮಾಹಿತಿ ನೀಡಿದ್ದಾರೆ.
ಈ ಕರುಣಾಜನಕ ವಿಡಿಯೋದಲ್ಲಿ ತುಳಸಿಯು 18 ತಿಂಗಳ ಮಗುವಿಗೆ ಮುಷ್ಠಿ ಕಟ್ಟಿ ಬಾರಿಸಿದ್ದಾಳೆ. ಆಕೆಯ ಹೊಡೆತ ಎಷ್ಟು ಜೋರಿತ್ತು ಅಂದರೆ ಮಗುವಿನ ಮೂಗು ಹಾಗೂ ಬಾಯಿಂದ ರಕ್ತ ಬರಲು ಆರಂಭಿಸಿದೆ. ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಲೇ ತುಳಸಿ ಮಗುವಿಗೆ ಅಮಾನವೀಯವಾಗಿ ಥಳಿಸಿದ್ದಾಳೆ.
ಇನ್ನೊಂದು ವಿಡಿಯೋದಲ್ಲಿ ತುಳಸಿ ಮಗುವಿನ ಕಾಲಿಗೆ ಮುಷ್ಠಿ ಕಟ್ಟಿ ಬಾರಿಸಿದ್ದಾಳೆ. ಮತ್ತೊಂದು ವಿಡಿಯೋದಲ್ಲಿ ಮಗುವಿಗೆ ನೀಡಿದ ಹೊಡೆತದಿಂದ ಮಗುವಿನ ದೇಹದಲ್ಲಿ ಹೇಗೆ ಕಲೆ ಬಿದ್ದಿದೆ ಅನ್ನೋದನ್ನು ತೋರಿಸಿದ್ದಾಳೆ.
ಈ ವಿಡಿಯೋ ನೋಡಿದ ಮಗುವಿನ ತಂದೆ ಆಂಧ್ರ ಪ್ರದೇಶಕ್ಕೆ ಓಡೋಡಿ ಬಂದಿದ್ದಾನೆ ಹಾಗೂ ಮಕ್ಕಳನ್ನು ತನ್ನೂರಿಗೆ ಕರೆದುಕೊಂಡು ಹೋಗಿದ್ದಾನೆ.
ಈ ನಡುವೆ ತುಳಸಿ ತಂದೆ ಗೋಪಾಲಕೃಷ್ಣ ಈ ಕೃತ್ಯದ ಬಗ್ಗೆ ತಮಗೆ ಅರಿವೇ ಇರಲಿಲ್ಲ ಎಂದು ಹೇಳಿದ್ದಾರೆ. ಆದರೆ ತಿಂಗಳ ಹಿಂದೆ ತುಳಸಿ ತನ್ನ ಮಗುವನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಳು ಎಂದು ಹೇಳಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮಹಿಳೆಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.