13 ವರ್ಷದ ಮಗಳಂತೆ ವೇಷ ಧರಿಸಿ ತಾಯಿ ಆಕೆಯ ಶಾಲೆಯಲ್ಲಿ ಒಂದು ದಿನ ಕಳೆಯಲು ಹೋಗಿ ಜೈಲುಪಾಲಾದ ಘಟನೆ ಟೆಕ್ಸಾಸ್ನಲ್ಲಿ ವರದಿಯಾಗಿದೆ.
ತನ್ನ ಪುತ್ರಿ ಓದುತ್ತಿರುವ ಶಾಲೆಯಲ್ಲಿ ಭದ್ರತೆ ಹೇಗಿದೆ ಎಂದು ಪರಿಶೀಲನೆ ಮಾಡಲು ಹೋಗಿ 30 ವರ್ಷದ ಕ್ಯಾಸೆ ಗಾರ್ಸಿಯಾ ಈ ಪೇಚಿಗೆ ಸಿಲುಕಿದ್ದಾಳೆ ಎನ್ನಲಾಗಿದೆ.
ಹೀಗಾಗಿ ತನ್ನ ಮಗಳು ಜೂಲಿಯಂತೆಯೇ ಶಾಲೆ ಸಮವಸ್ತ್ರ ಧರಿಸಿ ಕೂದಲಿಗೆ ಕಪ್ಪು ಬಣ್ಣವನ್ನ ಹಚ್ಚಿ ಗಾರ್ಸಿಯಾ ಶಾಲೆಗೆ ತಯಾರಾಗಿದ್ದಳು. ವಿದ್ಯಾರ್ಥಿಯಂತೆ ಶಾಲೆಗೆ ತೆರಳಿದ್ದ ಈಕೆ ಶಿಕ್ಷಕರೊಂದಿಗೂ ಮಾತನಾಡಿದ್ದಾಳೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಆರು ನಿಮಿಷಗಳ ವಿಡಿಯೋದಲ್ಲಿ ಗಾರ್ಸಿಯಾ ಹಳದಿ ಬಣ್ಣದ ಜಾಕೆಟ್ ಧರಿಸಿರೋದನ್ನ ನೀವು ಕಾಣಬಹುದಾಗಿದೆ. ಮಾಸ್ಕ್ ಧರಿಸಿಯೇ ಇದ್ದ ಗಾರ್ಸಿಯಾ ಶೌಚಾಲಯದಲ್ಲಿ ಸೆಲ್ಫಿಯನ್ನೂ ಕ್ಲಿಕ್ಕಿಸಿಕೊಂಡಿದ್ದಾಳೆ.
ಆದರೆ ಆಕೆ ಅಂದುಕೊಂಡಂತೆ ಪ್ಲಾನ್ ವರ್ಕೌಟ್ ಆಗಲಿಲ್ಲ. ಈಕೆಯನ್ನ ಶಾಲಾ ಆಡಳಿತ ಮಂಡಳಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದೆ. ವರದಿಗಳ ಪ್ರಕಾರ ಈಕೆಯನ್ನ 7808 ಡಾಲರ್ ಮೌಲ್ಯದ ಬಾಂಡ್ನ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ ಎನ್ನಲಾಗಿದೆ.
ಈಕೆ ಎಲ್ಲರನ್ನ ಯಾಮಾರಿಸುವಲ್ಲಿ ಯಶಸ್ವಿಯಾಗಿದ್ದಳು. ಆದರೆ ಕೊನೆಯ ತರಗತಿಯಲ್ಲಿ ಶಿಕ್ಷಕರು ಈಕೆ ಜ್ಯೂಲಿ ಅಲ್ಲ ಅನ್ನೋದನ್ನ ಗಮನಿಸಿದ್ದಾರೆ.