ವಾಯುಮಾಲಿನ್ಯದ ರಾಜಧಾನಿ ಎಂದೇ ಕುಖ್ಯಾತಿಗೆ ಗುರಿಯಾಗಿರುವ ನವದೆಹಲಿಯಲ್ಲಿ ಮುಂದಿನ ದಿನಗಳಲ್ಲಿ ವಿಷಗಾಳಿಯ ನಿಯಂತ್ರಣ ಆಗದಿದ್ದಲ್ಲಿ ಜನರು ಮಾರಣಾಂತಿಕ ವಾತಾವರಣದಲ್ಲಿ ಬದುಕುವುದು ಅನಿವಾರ್ಯ ಆಗಲಿದೆ.
ಈ ವಿಚಾರ ಸ್ಥಳೀಯರಿಗೆ ಎಷ್ಟು ಮನದಟ್ಟು ಆಗಿದೆಯೋ, ಆಡಳಿತಾರೂಢ ಪಕ್ಷಕ್ಕೂ ಗೊತ್ತಿದೆ. ಹಾಗಾಗಿ ಕಠಿಣ ಕ್ರಮಗಳನ್ನು ಈಗಾಗಲೇ ಜಾರಿ ಮಾಡಲಾಗಿದೆ. ಪ್ರಮುಖ ಜನದಟ್ಟಣೆ ಸ್ಥಳಗಳಲ್ಲಿ ವಿಷಗಾಳಿಯನ್ನು ಸಂಸ್ಕರಿಸಿ ಶುದ್ಧಗಾಳಿಯನ್ನು ವಾತಾವರಣಕ್ಕೆ ಬಿಡುವ ಸ್ಮಾಗ್ ಟವರ್‌ಗಳನ್ನು ಕೂಡ ಸ್ಥಾಪಿಸಲಾಗಿದೆ. ಆದರೆ, ಇವೆಲ್ಲಕ್ಕಿಂತ ಬಹಳ ಮುಖ್ಯ ಎಂದರೆ ವಾಹನದಟ್ಟಣೆ ನಿಯಂತ್ರಣ. ಅದರಲ್ಲೂ ಡೀಸೆಲ್ ವಾಹನಗಳ ಮೇಲೆ ಮಿತಿ.
ಈ ನಿಟ್ಟಿನಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಸರಕಾರವು ಖಡಕ್ ನಿಯಮಗಳನ್ನು ಜಾರಿ ಮಾಡಿದೆ. 10 ವರ್ಷಗಳಷ್ಟು ಹಳೆಯದಾದ ಡೀಸೆಲ್ ವಾಹನಗಳು ವಾಯುಮಾಲಿನ್ಯ ಮಾಡುತ್ತಿಲ್ಲ ಎಂಬ ಬಗ್ಗೆ ಆರ್‌ಟಿಒ ಅಧಿಕಾರಿಗಳಿಂದ ಕೂಲಂಕುಷ ತಪಾಸಣೆಗೆ ಒಳಪಡಬೇಕು. ಬಳಿಕ ಅಧಿಕೃತ ಪರವಾನಗಿ ಪಡೆಯಬೇಕು. ಇಲ್ಲವಾದಲ್ಲಿ ಅಂಥ ವಾಹನಗಳನ್ನು ಟ್ರಾಫಿಕ್ ಪೊಲೀಸರು ವಶಕ್ಕೆ ಪಡೆದು, ವಾಹನ ನೋಂದಣಿಯನ್ನು ರದ್ದುಪಡಿಸುತ್ತಿದ್ದಾರೆ. ಈಗಾಗಲೇ 1 ಲಕ್ಷಕ್ಕೂ ಅಧಿಕ ಡೀಸೆಲ್ ಚಾಲಿತ ವಾಹನಗಳ ನೋಂದಣಿ ರದ್ದುಪಡಿಸಲಾಗಿದೆ ಎಂದು ದೆಹಲಿ ಸಾರಿಗೆ ಸಚಿವ ಕೈಲಾಷ್ ಗೆಹ್ಲೋಟ್ ತಿಳಿಸಿದ್ದಾರೆ.
10 ವರ್ಷಕ್ಕೂ ಹೆಚ್ಚು ಹಳೆಯದಾದದ ನೋಂದಣಿ ರದ್ದುಗೊಂಡ ವಾಹನಗಳನ್ನು ಇತರ ರಾಜ್ಯಗಳಲ್ಲಿ ಆರ್‌ಟಿಒ ನಿಯಮಗಳ ಅನ್ವಯ ಚಾಲನೆ ಮಾಡಲು ಅವಕಾಶವಿದೆ. ದೆಹಲಿಯಲ್ಲಿ ಇಂಥ ವಾಹನಗಳ ಮರುಬಳಕೆ ಮಾಡಬೇಕಾದಲ್ಲಿ ಅವುಗಳನ್ನು ಇಲೆಕ್ಟ್ರಿಕ್ ವಾಹನಗಳಾಗಿ ಮಾರ್ಪಡಿಸಬೇಕಾಗುತ್ತದೆ. ಅದಕ್ಕೂ ಸರಕಾರದಿಂದ ಅಗತ್ಯ ನೆರವು ನೀಡಲಾಗುತ್ತಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ.
ಸಾರ್ವಜನಿಕ ಸಾರಿಗೆಯನ್ನು ಜನರು ಪ್ರಮುಖವಾಗಿ ಸಂಚಾರಕ್ಕೆ ಬಳಸಲು ಸೂಚಿಸಲಾಗುತ್ತಿದೆ. ಸಾರಿಗೆ ವ್ಯವಸ್ಥೆಯನ್ನು ಉತ್ತಮಗೊಳಿಸಲಾಗುತ್ತಿದೆ. ಇದರಿಂದ ವಾಹನದಟ್ಟಣೆ, ವಾಯುಮಾಲಿನ್ಯ ಕಡಿಮೆ ಆಗಲಿದೆ. ಓಮಿಕ್ರಾನ್ ಸೋಂಕು ಭೀತಿ ಹಿನ್ನೆಲೆಯಲ್ಲಿ ಸದ್ಯಕ್ಕೆ ಬಸ್‌ವೊಂದರಲ್ಲಿ 35 ಸೀಟುಗಳ ಪೈಕಿ 17-18 ಮಂದಿ ಪ್ರಯಾಣಿಕರ ಭರ್ತಿಗೆ ಮಾತ್ರವೇ ಅವಕಾಶ ನೀಡಲಾಗಿದೆ ಎಂದಿದ್ದಾರೆ.