ರಾಂಚಿ: ರೂಪದರ್ಶಿಯರು ರ್ಯಾಂಪ್ ನಲ್ಲಿ ಕ್ಯಾಟ್ ವಾಕ್ ಮಾಡುವುದು ಸಾಮಾನ್ಯ. ಆದರೆ ಇಲ್ಲೊಬ್ಬಳು ಮಾಡೆಲ್ ಕಸದ ರಾಶಿಯ ಬಳಿ ಬೆಕ್ಕಿನ ನಡಿಗೆ ಮಾಡಿರುವ ವಿಡಿಯೋ ತುಣುಕು ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಆರೋಗ್ಯ ಹಾಗೂ ಪರಿಸರ ಅಪಾಯಗಳಿಗೆ ಕಾರಣವಾಗುವ ಕಸವನ್ನು ಅಸುರಕ್ಷಿತವಾಗಿ ಎಸೆಯುವುದರ ಅಡ್ಡಪರಿಣಾಮಗಳಿಗೆ ಸರ್ಕಾರ ಹಾಗೂ ರಾಂಚಿ ಮುನ್ಸಿಪಲ್ ಕಾರ್ಪೊರೇಷನ್ ನ್ನು ಎಚ್ಚರಗೊಳಿಸುವುದು ಇದರ ಉದ್ದೇಶವಾಗಿದೆ ಎಂದು ಇದರ ವಿಡಿಯೋ ತಯಾರಕರು ಹೇಳಿದ್ದಾರೆ. ಕೆಂಪು ಬಣ್ಣದ ಗೌನ್ ಧರಿಸಿರುವ ಸುಂದರವಾದ ಮಾಡೆಲ್ ರ್ಯಾಂಪ್ ಬದಲು ಕಸದ ರಾಶಿ ಬಳಿ ಕ್ಯಾಟ್ ವಾಕ್ ಮಾಡಿದ್ದಾರೆ.
ರಾಂಚಿ ಮೂಲದ ಫ್ಯಾಷನ್ ಫೋಟೋಗ್ರಾಫರ್ ಆಗಿರುವ ಪ್ರಾಂಜಲ್ ಕುಮಾರ್ ಅವರು ಜುಲೈ 22ರಂದು ಈ ವಿಡಿಯೋ ಮಾಡಿದ್ದರು. ಆದರೆ ಭಾನುವಾರ ರಾತ್ರಿ ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
“ಸುಮಾರು 4 ಗಂಟೆಗಳ ಕಾಲ ಮಾಡೆಲ್ ಬೆಕ್ಕಿನ ನಡಿಗೆಯ ವಿಡಿಯೋ ಮಾಡಲಾಯಿತು. ಮಾಡೆಲ್ ಆಯ್ಕೆಗಾಗಿ 4 ರಿಂದ 5 ಜನ ರೂಪದರ್ಶಿಯರನ್ನು ಸಂಪರ್ಕಿಸಲಾಯಿತು. ಅಲ್ಲದೆ ಈ ಸ್ಥಳಕ್ಕೆ ಅವರನ್ನು ಕರೆತಂದು ತೋರಿಸಲಾಯಿತು. ಇಲ್ಲಿನ ಪರಿಸ್ಥಿತಿ ಅರಿತ ರೂಪದರ್ಶಿ ಸುರಭಿ ಕ್ಯಾಟ್ ವಾಕ್ ಮಾಡಲು ಒಪ್ಪಿಕೊಂಡರು” ಎಂದು ಪ್ರಾಂಜಲ್ ಹೇಳಿದರು.