ಮೊಡವೆ, ಕಲೆಗಳಿಲ್ಲದ ಮುಖವೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಎಲ್ಲರಿಗೂ ತಮ್ಮ ಮುಖ ಅಂದವಾಗಿ ಕಾಣಬೇಕು ಎಂಬ ಆಸೆ ಇರುತ್ತದೆ. ನಾನಾ ತರಹದ ಕ್ರೀಂ ಗಳನ್ನು ಉಪಯೋಗಿಸುತ್ತಾರೆ. ಇದು ಸ್ವಲ್ಪ ದಿನದ ಮಟ್ಟಿಗೆ ಸುಂದರವಾಗಿ ಕಂಡರೂ ನಂತರ ಮುಖದಲ್ಲಿ ನೆರಿಗೆ ಮೂಡುವುದು, ಮುಖದ ಕಾಂತಿ ಕಳೆದುಕೊಳ್ಳುವಿಕೆ ಉಂಟಾಗುತ್ತದೆ. ಹಾಗಾಗಿ ಹಾಲನ್ನು ಮುಖಕ್ಕೆ ಫೇಸ್ ಪ್ಯಾಕ್ ರೀತಿ ಹಚ್ಚಿಕೊಳ್ಳುವುದರಿಂದ ಈ ಸಮಸ್ಯೆಗಳಿಗೆಲ್ಲಾ ಗುಡ್ ಬೈ ಹೇಳಬಹುದು.
ಹಾಲಿನಲ್ಲಿ ಲ್ಯಾಕ್ಟಿಕ್ ಆ್ಯಸಿಡ್, ಕ್ಯಾಲ್ಸಿಯಂ, ಪೋಟ್ಯಾಷಿಯಂ, ವಿಟಮಿನ್ ಬಿ12, ಬಿ6, ಎ, ಡಿ2, ಮಗ್ನೇಷಿಯಂ, ಪ್ರೋಟಿನ್ ಹೇರಳವಾಗಿದೆ. ಇದು ಮುಖದ ಜೀವಕೋಶಗಳನ್ನು ಹಾಳಾಗದಂತೆ ನೋಡಿಕೊಳ್ಳುತ್ತದೆ. ತ್ವಚೆಯನ್ನು ತೇವಾಂಶವಾಗಿರುವಂತೆ ನೋಡಿಕೊಳ್ಳುತ್ತದೆ. ಹಾಗೇ ಮುಖವನ್ನು ಇದು ಸ್ವಚ್ಛಗೊಳಿಸುತ್ತದೆ.
ನಿಮ್ಮ ತ್ವಚೆ ನಳನಳಿಸುತ್ತಿರಬೇಕು ಎಂದರೆ 2 ದೊಡ್ಡ ಚಮಚ ಬೆಣ್ಣೆಹಣ್ಣಿನ ತಿರುಳಿಗೆ, 1 ಟೇಬಲ್ ಚಮಚ ಹಾಲು ಸೇರಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಂಡು ಅರ್ಧಗಂಟೆ ಬಿಟ್ಟು ಮುಖ ತೊಳೆಯಿರಿ ಇದರಿಂದ ಮುಖದ ಅಂದ ಹೆಚ್ಚುತ್ತದೆ ಹಾಗೇ ಮುಖದ ರಂಧ್ರದಲ್ಲಿನ ಕಲ್ಮಶಗಳು ದೂರವಾಗುತ್ತದೆ.
1 ಟೀ ಸ್ಪೂನ್ ಅರಿಶಿನ ಪುಡಿಗೆ ಸ್ವಲ್ಪ ಹಸಿ ಹಾಲು ಸೇರಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಸ್ವಚ್ಛಗೊಳಿಸಿದ ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಬಿಟ್ಟು ಮುಖ ತೊಳೆಯಿರಿ. ಇದರಿಂದ ಮೊಡವೆ ಸಮಸ್ಯೆಗಳು ದೂರವಾಗುತ್ತದೆ.