ಬೆಂಗಳೂರು: ಹಾಲು ಒಕ್ಕೂಟಗಳು ರೈತರಿಗೆ ನೀಡುವ ಹಾಲು ಖರೀದಿ ದರ ಕಡಿತಗೊಳಿಸಲಾಗಿದೆ. ಮೊದಲೇ ಸಂಕಷ್ಟದಲ್ಲಿರುವ ಹೈನು ಉತ್ಪಾದಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಒಕ್ಕೂಟಗಳು ನಷ್ಟದಲ್ಲಿರುವ ಕಾರಣ ದರ ಕಡಿತ ಅನಿವಾರ್ಯವೆಂದು ಆಡಳಿತ ಮಂಡಳಿಗಳು ಹೇಳಿವೆ. ಪಶು ಆಹಾರ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ಹಾಲಿನ ದರ ಕಡಿತ ಮಾಡಿರುವುದು ಹಾಲು ಉತ್ಪಾದಕರಿಗೆ ಬರೆ ಎಳೆದಂತಾಗಿದೆ. ಅಲ್ಲದೆ, ಕಳೆದ ಐದು ತಿಂಗಳಿನಿಂದ ಸರ್ಕಾರ ನೀಡುವ ಸಹಾಯಧನವೂ ರೈತರಿಗೆ ಬಿಡುಗಡೆಯಾಗಿಲ್ಲ.
ಹಾಲಿನ ದರ ಹೆಚ್ಚಳ ಮಾಡಿದರೆ ಗ್ರಾಹಕರಿಗೆ ಹೊರೆಯಾಗುತ್ತದೆ. ಹೆಚ್ಚಳ ಮಾಡದಿದ್ದರೆ ಒಕ್ಕೂಟಗಳು ನಷ್ಟಕ್ಕೆ ಸಿಲುಕುತ್ತವೆ. ಹೀಗಾಗಿ ಹಾಲು ಉತ್ಪಾದಕ ರೈತರನ್ನೇ ನಷ್ಟಕ್ಕೆ ದೂಡಲಾಗಿದೆ ಎಂಬ ಆಕ್ರೋಶ ಕೇಳಿ ಬಂದಿದೆ.
ವಿವಿಧ ಹಾಲು ಒಕ್ಕೂಟಗಳು ನಷ್ಟದ ಕಾರಣ ರೈತರಿಂದ ಖರೀದಿಸುವ ಹಾಲಿನ ದರ ಕಡಿತ ಮಾಡಿವೆ. ಶಿವಮೊಗ್ಗ ಹಾಲು ಒಕ್ಕೂಟ ಒಂದು ಲೀಟರ್ ಹಾಲಿಗೆ 90 ಪೈಸೆ ಕಡಿತಗೊಳಿಸಿದೆ. ಹಾಸನ ಒಕ್ಕೂಟ 1 ರೂ., ರಾಯಚೂರು ಒಕ್ಕೂಟ 1.50 ರೂ., ಬೆಳಗಾವಿ ಒಕ್ಕೂಟ 2 ರೂ., ವಿಜಯಪುರ/ಬಾಗಲಕೋಟೆ ಹಾಲು ಒಕ್ಕೂಟ 2 ರೂ., ಮೈಸೂರು ಹಾಲು ಒಕ್ಕೂಟ 2 ರೂಪಾಯಿ ಕಡಿತಗೊಳಿಸಿದೆ.
ಹಾಲು ಉತ್ಪಾದನೆ ಹೆಚ್ಚಾಗಿ ಮಾರಾಟ ಕಡಿಮೆ ಇರುವ ಕಾರಣ ಒಕ್ಕೂಟ ನಷ್ಟದಲ್ಲಿವೆ. ಹೀಗಾಗಿ ಹಾಲಿನ ದರ ಕಡಿತ ಮಾಡಲಾಗಿದೆ ಎಂದು ಆಡಳಿತ ಮಂಡಳಿಗಳು ಹೇಳಿವೆ. ಇನ್ನು ಹಾಲಿನ ದರ ಕಡಿತ ಮಾಡಿರುವುದು ಒಂದೆಡೆಯಾದರೆ ಸರ್ಕಾರ ರೈತರಿಗೆ ಪ್ರತಿ ಲೀಟರ್ ಹಾಲಿಗೆ ನೀಡುವ 5 ರೂ. ಸಹಾಯಧನ ಕಳೆದ ಐದು ತಿಂಗಳಿನಿಂದ ಬಿಡುಗಡೆಯಾಗಿಲ್ಲ. ಕೆಲವು ರೈತರಿಗೆ ಮಾತ್ರ ಏಪ್ರಿಲ್ ನಲ್ಲಿ ಸಹಾಯಧನ ಬಂದಿದೆ. ಮೇ ತಿಂಗಳಿನಿಂದ ಯಾವ ರೈತರಿಗೂ ಸಹಾಯಧನ ಬಿಡುಗಡೆಯಾಗಿಲ್ಲ ಎಂದು ರೈತರು ದೂರಿದ್ದಾರೆ.