ರಾಯಚೂರು: ಕೆ.ಎಂ.ಎಫ್ ನಂದಿನಿ ಹಾಲಿನ ದರ ಹೆಚ್ಚಳ ಮಾಡಿದ್ದು, ನೂತನ ದರ ಇಂದು ಸಂಜೆಯಿಂದ ಜಾರಿಗೆ ಬರಲಿದೆ. ಆದರೆ ರಾಜ್ಯದ ಕೆಲವೆಡೆಗಳಲ್ಲಿ ಹಳೆ ಪ್ಯಾಕೇಟ್ ಗೆ ಹೊಸ ದರ ವಿಧಿಸಿ ಹಣ ವಸೂಲಿ ಮಾಡುತ್ತಿದ್ದು, ಗ್ರಾಹಕರು ಕಿಡಿಕಾರಿದ್ದಾರೆ.
ರಾಯಚೂರು ಸೇರಿದಂತೆ ವಿವಿಧೆಡೆಗಳಲ್ಲಿ ನಂದಿನಿ ಹಾಲಿನ ಹಳೆ ದರದ ಪ್ಯಾಕೇಟ್ ಹಾಲನ್ನು ಹೊಸ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಪ್ರತಿ ಅರ್ಧ ಲೀಟರ್ ಹಾಗೂ ಒಂದು ಲೀಟರ್ ಪ್ಯಾಕೆಟ್ ಹಾಲಿಗೆ ಹೆಚ್ಚುವರು 2 ರೂಪಾಯಿ ಪಡೆಯಲಾಗುತ್ತಿದೆ.
ಕೆ.ಎಂ.ಎಫ್ ಆದೇಶದಲ್ಲಿ ಜೂನ್ 26ರಿಂದ ಹೊಸ ದರ ಅನ್ವಯ ಎಂಬ ಕಾರಣಕ್ಕೆ ಹಳೇ ಪ್ಯಾಕೇಟ್ ಹಾಲಿಗೂ ಹೊಸ ದರದಲ್ಲಿ ಮಾರಾಟ ಮಾಡುತ್ತಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಲಿನ ದರ ಏರಿಕೆ ಜನಸಾಮಾನ್ಯರಿಗೆ ಹೊರೆಯಾಗಿದೆ. ಅದರ ಜೊತೆಗೆ ಹಳೇ ಪ್ಯಾಕೇಟ್ ಹಾಲನ್ನೂ ಅಂಗಡಿಯವರು ಹೊಸ ದರಕ್ಕೆ ಮಾರುತ್ತಿದ್ದಾರೆ. ಇದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ಜೂನ್ 26ರಂದು ಸಂಜೆ ಬರುವ ಪ್ಯಾಕೇಟ್ ಹಾಲಿನ ದರವನ್ನು ಹೊಸ ದರದಂತೆ ಮಾರಾಟ ಮಾಡಬೇಕು ಎಂದು ವ್ಯಾಪಾರಿಗಳಿಗೆ ಕೆ.ಎಂ.ಎಫ್ ಅಧಿಕಾರಿಗಳು ಸೂಚಿಸಿದ್ದಾರೆ .