ಮಂಗಳೂರು: ಜನವರಿ 1ರಿಂದ ಹಾಲು ಉತ್ಪಾದಕರಿಗೆ ವಿಶೇಷ ಪ್ರೋತ್ಸಾಹ ಧನವನ್ನು 1 ರೂ.ನಿಂದ 1.50 ರೂ.ಗೆ ಹೆಚ್ಚಳ ಮಾಡಲು ಕಳೆದ ನವೆಂಬರ್ 30ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಂತೆಯೇ 4.5 ಫ್ಯಾಟ್ ನಿಂದ 8.5 ಎಸ್ಎಂಎಫ್ ಗೆ ರೈತರಿಗೆ ನೀಡುವ ದರವನ್ನು 36.74 ರೂ.ನಿಂದ 36.95 ರೂ.ಗೆ ಏರಿಕೆ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷ ಸುಚರಿತ್ ಶೆಟ್ಟಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಹೈನುಗಾರರಿಗೆ ಹಾಲು ಉತ್ಪಾದನೆಗೆ ಸಂಬಂಧಿಸಿದಂತೆ ಆಗುತ್ತಿರುವ ಆರ್ಥಿಕ ನಷ್ಟವನ್ನು ಪರಿಗಣಿಸಿ ವಿಶೇಷ ಪ್ರೋತ್ಸಾಹ ಧನ ಹೆಚ್ಚಳಕ್ಕೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಜಿಲ್ಲಾ ಒಕ್ಕೂಟಕ್ಕೆ ಪ್ರತಿ ತಿಂಗಳು ಸುಮಾರು 55 ಲಕ್ಷ ರೂ. ಹೆಚ್ಚುವರಿ ಮೊತ್ತ ಹೈನುಗಾರರಿಗೆ ನೀಡಬೇಕಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಒಳಗೊಂಡ ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ 749 ಸಂಘಗಳಿಂದ 3.40 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತದೆ ಎಂದು ತಿಳಿಸಿದ್ದಾರೆ.
ರೈತರಿಗೆ ನೀಡುವ ಹಾಲಿನ ವಿಶೇಷ ಪ್ರೋತ್ಸಾಹ ಧನವನ್ನು ಏರಿಕೆ ಮಾಡಲಾಗಿದ್ದು, ರಾಜ್ಯ ಸರ್ಕಾರ ಇತರೆ ಜಿಲ್ಲೆಗಳಿಗಿಂತ ಪ್ರತಿ ಲೀಟರ್ ಗೆ ಕನಿಷ್ಠ 1 ರೂ.ಷ್ಟು ಪ್ರೋತ್ಸಾಹ ಧನ ಹೆಚ್ಚಳ ಮಾಡಬೇಕೆಂದು ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.