ರಾಮನಗರ: ರಾಜ್ಯದಲ್ಲಿ ಮತ್ತೊಮ್ಮೆ ಹಾಲಿನ ದರ ಹೆಚ್ಚಳ ಮಾಡಲು ನಿರ್ಧರಿಸಿದ್ದು, ಶೀಘ್ರವೇ ಸಭೆ ಕರೆಯಲಾಗುವುದು. ಹೆಚ್ಚಳ ಮಾಡಿದ ದರವನ್ನು ರೈತರಿಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಗಡಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ, ಉದ್ಘಾಟನಾ ಸಮಾರಂಭದಲ್ಲಿ ನೆರವೇರಿಸಿ ಮಾತನಾಡಿದ ಅವರು, ರೈತರು ನಮ್ಮ ಪರ ಮಾತನಾಡುತ್ತಿರಿ ಅನ್ನುವುದಾದರೆ ಹಾಲಿನ ದರ ಹೆಚ್ಚಳ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಸಹಕಾರ ಸಚಿವ ಕೆ.ಎನ್. ರಾಜಣ್ಣ ಹಾಲಿನ ತರಹ ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದರು. 5 ರೂ. ಹೆಚ್ಚಳಕ್ಕೆ ಅವರು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಈ ಹಿಂದೆ ಸಹಕಾರ ಸಚಿವ ರಾಜಣ್ಣನವರು ಹಾಲಿನ ದರ ಹೆಚ್ಚಳ ಮಾಡುವಂತೆ ಹೇಳಿದ್ದರು. ಇದಕ್ಕೆ ವಿರೋಧ ಪಕ್ಷಗಳು ಬಾಯಿ ಬಡಿದುಕೊಂಡಾಗ ನೀವು ಜೋರಾಗಿ ಪ್ರಶ್ನೆ ಮಾಡಬೇಕಿತ್ತಲ್ಲವೇ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಹಾಲಿನ ದರ ಹೆಚ್ಚಳದ ಜೊತೆಗೆ ಡೇರಿಗಳಿಗೆ ಪ್ರತಿ ಲೀಟರ್ ಹಾಲಿಗೆ 20 ಪೈಸೆ ಕೊಡುವಂತೆ ಒಕ್ಕೂಟದವರು ಕೇಳುತ್ತಿದ್ದು, ಈ ಸಂಬಂಧ ಕೆಎಂಎಫ್ ಹಾಗೂ ಹಾಲು ಒಕ್ಕೂಟಗಳ ಅಧ್ಯಕ್ಷರ ಸಭೆ ಕರೆದು ಚರ್ಚಿಸಿ ತೀರ್ಮಾನ ಮಾಡುವುದಾಗಿ ಸಿಎಂ ತಿಳಿಸಿದ್ದಾರೆ.
ಕಳೆದ ಜೂನ್ ನಲ್ಲಿ ಹಾಲಿನ ಪ್ರಮಾಣ ಹೆಚ್ಚಳ ಮಾಡಿ ಪ್ರತಿ ಲೀಟರ್ ಹಾಲಿನ ದರ ಎರಡು ರೂಪಾಯಿಯಷ್ಟು ಹೆಚ್ಚಳ ಮಾಡಲಾಗಿತ್ತು. ಈಗ ಮತ್ತೊಮ್ಮೆ ಹಾಲಿನ ದರ ಏರಿಕೆಯಾಗುವ ಸಾಧ್ಯತೆ ಇದೆ.