ಬೆಂಗಳೂರು: ಹಾಲು ಮತ್ತು ಹಾಲಿನ ಉತ್ಪನ್ನಗಳ ದರ ಏರಿಕೆ ವಿಚಾರ ಸರ್ಕಾರದ ನೀತಿ ನಿರ್ಧಾರಕ್ಕೆ ಒಳಪಟ್ಟಿರುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ದರ ಏರಿಕೆ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ವಜಾಗೊಳಿಸಿದೆ.
ನಂದಿನಿ ಹಾಲು ದರ ಎರಡು ರೂಪಾಯಿ ಏರಿಕೆ ಮಾಡಿ ಜೂನ್ 26ರಂದು ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬೆಂಗಳೂರಿನ ಬಿಳೇಕಳ್ಳಿಯ ಲೆಕ್ಕಪರಿಶೋಧಕಿ ಡಾ. ಆರ್. ಅಮೃತಾ ಲಕ್ಷ್ಮಿ ಸಲ್ಲಿಸಿದ್ದ ಪಿಐಎಲ್ ವಿಚಾರ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠದಿಂದ ಈ ಆದೇಶ ನೀಡಲಾಗಿದೆ.
ಬೆಲೆ ಏರಿಕೆ ತಜ್ಞರ ಅಭಿಪ್ರಾಯ ಸರ್ಕಾರದ ನಿರ್ದಿಷ್ಟ ನೀತಿಯಿಂದ ನಿರ್ಣಾಯಕವಾಗಿರುತ್ತದೆ. ಕೆಎಂಎಫ್ ವಾಣಿಜ್ಯ ಉದ್ದೇಶದಿಂದ ಬೆಲೆ ಹೆಚ್ಚಳ ಮಾಡುವ ನಿರ್ಧಾರ ಕೈಗೊಂಡಿದೆ. ಶಾಸನಬದ್ಧ ನೀತಿ ಉಲ್ಲಂಘನೆ ಮಾಡಿದ ಸಂದರ್ಭದಲ್ಲಿ ಹೊರತುಪಡಿಸಿ ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ವಿಚಾರಣೆಗೆ ಪರಿಗಣಿಸಲಾಗುವುದಿಲ್ಲ. ಈ ಅಂಶಗಳಿಂದಾಗಿ ಅರ್ಜಿ ವಜಾಗೊಳಿಸಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.