ಬೆಂಗಳೂರು: ರೈತರ ಬೃಹತ್ ಪ್ರತಿಭಟನೆಗೆ ಮಣಿದು ಕಡಿತ ಮಾಡಿದ್ದ ಹಾಲಿನ ದರ ಇಳಿಕೆ ಆದೇಶವನ್ನು ವಾಪಸ್ ಪಡೆಯುವುದಾಗಿ ಬೆಂಗಳೂರು ಹಾಲು ಒಕ್ಕೂಟ ಭರವಸೆ ನೀಡಿದೆ.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹಾಲು ಖರೀದಿ ದರ ಇಳಿಕೆ, ಪಶು ಆಹಾರ ದರ ಹೆಚ್ಚಳ ಖಂಡಿಸಿ ಹಾಲು ಒಕ್ಕೂಟದ ಎದುರು ರೈತರು ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಬೆಂಗಳೂರು ಹಾಲು ಒಕ್ಕೂಟ ವ್ಯಾಪ್ತಿಯ ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಹಾಲು ಉತ್ಪಾದಕರಿಗೆ ನೀಡುತ್ತಿದ್ದ ದರದಲ್ಲಿ ನವೆಂಬರ್ 1 ರಿಂದ ಲೀಟರ್ ಗೆ ಎರಡು ರೂಪಾಯಿ ಕಡಿತ ಮಾಡಲಾಗಿದೆ. ಪಶು ಆಹಾರದ ಬೆಲೆಯನ್ನು ಕೆಜಿಗೆ ಎರಡು ರೂಪಾಯಿ ಹೆಚ್ಚಳ ಮಾಡಲಾಗಿದೆ.
ಇದನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಒಕ್ಕೂಟದ ಅಧ್ಯಕ್ಷ ರಾಜಕುಮಾರ್ ಅವರು ಡಿ. 1ರಂದು ಕಾರ್ಯಕಾರಿ ಸಮಿತಿ ಸಭೆ ಕರೆದು ಹಾಲಿನ ದರ ಇಳಿಕೆ ಆದೇಶ ವಾಪಸ್ ಪಡೆಯಲಾಗುವುದು. ಪಶು ಆಹಾರ ದರ ಇಳಿಕೆ ಬಗ್ಗೆ ಕೆಎಂಎಫ್ ಅಧ್ಯಕ್ಷರ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಗಿದ್ದು, ಬೇಡಿಕೆ ಈಡೇರಿಸದಿದ್ದರೆ ಡಿಸೆಂಬರ್ 2ರಿಂದ ಒಕ್ಕೂಟಕ್ಕೆ ಹಾಲು ನೀಡುವುದನ್ನು ನಿಲ್ಲಿಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.