ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಹಾಲು ಸಂಗ್ರಹಣೆಯಲ್ಲಿ ಭಾರಿ ಇಳಿಕೆಯಾಗಿದೆ. 2022 ರ ಜುಲೈ ಬಳಿಕ ಈ ಇಳಿಕೆ ಕಂಡುಬಂದಿದ್ದು, ಪ್ರತಿದಿನ 10 ಲಕ್ಷ ಲೀಟರ್ ನಷ್ಟು ಹಾಲು ಸಂಗ್ರಹಣೆ ಕಡಿಮೆಯಾಗಿದೆ ಎನ್ನಲಾಗಿದೆ. ರಾಜ್ಯದ 26 ಲಕ್ಷ ಹೈನುಗಾರರಿಂದ ಕರ್ನಾಟಕ ಹಾಲು ಮಹಾಮಂಡಳ (KMF) ಈಗ ಪ್ರತಿ ದಿನ 75.6 ಲಕ್ಷ ಲೀಟರ್ ಹಾಲು ಸಂಗ್ರಹಣೆ ಆಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಮೊದಲು ಅಂದರೆ 2021 – 22ರ ಅವಧಿಯಲ್ಲಿ ಪ್ರತಿದಿನ 84.5 ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗುತ್ತಿದ್ದು, ಕಾಲುಬಾಯಿ ಜ್ವರ, ಲಂಪಿ ಸ್ಕಿನ್ ಡಿಸೀಸ್, ಪ್ರವಾಹ, ಬರ ಮೊದಲಾದ ಕಾರಣಗಳಿಂದ ಹಾಲಿನ ಸಂಗ್ರಹಣೆ ಕಡಿಮೆಯಾಗಿದೆ ಎಂದು ಹೇಳಲಾಗಿದೆ. ಅಲ್ಲದೆ ಮುಂದಿನ ಬೇಸಿಗೆಯಲ್ಲಿ ಮೇವಿನ ಕೊರತೆ ಎದುರಾಗುವ ಕಾರಣ ಹಾಲು ಸಂಗ್ರಹಣೆ ಮತ್ತಷ್ಟು ಇಳಿಕೆಯಾಗಬಹುದು ಎಂದು ಹೇಳಲಾಗುತ್ತಿದೆ.
ಹಾಲು ಸಂಗ್ರಹಣೆ ಕಡಿಮೆಯಾಗಿರುವ ಕಾರಣ ಹಾಲಿನ ಉತ್ಪನ್ನಗಳಾದ ತುಪ್ಪ, ಬೆಣ್ಣೆ, ಪನ್ನೀರ್ ಮೊದಲಾದವುಗಳ ತಯಾರಿಕೆಯ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ಬೆಣ್ಣೆ, ತುಪ್ಪದ ಬೆಲೆಯಲ್ಲಿ ಕೆಜಿಗೆ 30 ರಿಂದ 40 ರೂಪಾಯಿಗಳಷ್ಟು ಏರಿಕೆಯಾಗಿದೆ. ಅಲ್ಲದೆ ಕ್ಷೀರ ಭಾಗ್ಯ ಯೋಜನೆ ಅಡಿ ಸರ್ಕಾರಿ ಶಾಲೆಗೆ ವಿತರಿಸುವ ಹಾಲಿನ ಪೌಡರ್ ಉತ್ಪಾದನೆಯೂ ಸ್ವಲ್ಪ ಕಡಿಮೆಯಾಗಬಹುದು ಎನ್ನಲಾಗಿದೆ.
ಆದರೆ ಹಾಲಿನ ಪೌಡರ್ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹದಲ್ಲಿರುವ ಕಾರಣ ಏಪ್ರಿಲ್ ವರೆಗೆ ಸಾಕಾಗಲಿದ್ದು ಬಳಿಕ ಶಾಲೆಗಳಿಗೆ ರಜೆ ಆರಂಭವಾಗುತ್ತದೆ. ಮುಂದಿನ ದಿನಗಳಲ್ಲಿ ಹಾಲು ಸಂಗ್ರಹಣೆಯಲ್ಲಿ ಮತ್ತೆ ಯಥಾ ಸ್ಥಿತಿ ಬರಬಹುದು ಎಂದು ಮೂಲಗಳು ತಿಳಿಸಿವೆ.