
ಬೆಂಗಳೂರು: ರಾಜ್ಯದಲ್ಲಿ ಹಾಲಿನ ಸಂಗ್ರಹಣೆ ಪ್ರಮಾಣ ಹೆಚ್ಚಳವಾಗಿರುವ ಕಾರಣ ಜಿಲ್ಲಾ ಹಾಲು ಒಕ್ಕೂಟಗಳ ನಷ್ಟ ತಗ್ಗಿಸಲು ಹಾಲು ಖರೀದಿ ದರ ಕಡಿಮೆ ಮಾಡಲಾಗಿದೆ.
ತೆರೆಮರೆಯಲ್ಲಿ ಹಲವು ಜಿಲ್ಲಾ ಒಕ್ಕೂಟಗಳು ಉತ್ಪಾದಕರಿಂದ ಖರೀದಿಸುವ ಹಾಲಿನ ದರವನ್ನು ಕಡಿಮೆ ಮಾಡಿವೆ. ಬೇಸಿಗೆಯಲ್ಲಿ ಹಾಲು ಸಂಗ್ರಹಣೆ ಕುಸಿದಿದ್ದ ಹಿನ್ನೆಲೆಯಲ್ಲಿ ಬಹುಪಾಲು ಒಕ್ಕೂಟಗಳು ರೈತರ ಹಿತದೃಷ್ಟಿಯಿಂದ ಹಾಲು ಖರೀದಿ ಹೆಚ್ಚಳ ಮಾಡಿದ್ದವು.
ಮುಂಗಾರು ಆರಂಭದ ಬಳಿಕ ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗಿದ್ದು, ಹಾಲು ಸಂಗ್ರಹಣೆ ನಿರೀಕ್ಷೆಗೂ ಮೀರಿ ಜಾಸ್ತಿಯಾಗಿದೆ. ಇದರಿಂದ ಒಕ್ಕೂಟಗಳಿಗೆ ಹಾಲಿನ ಮಾರಾಟ ಸವಾಲಾಗಿ ಪರಿಣಮಿಸಿದೆ. ಹಾಲು ಸಂಗ್ರಹಣೆ ಹೆಚ್ಚಳವಾಗಿ ಒಕ್ಕೂಟಗಳು ಆರ್ಥಿಕ ನಷ್ಟಕ್ಕೆ ಸಿಲುಕಿವೆ. ಈ ಹಿನ್ನೆಲೆಯಲ್ಲಿ ನಷ್ಟದಿಂದ ಪಾರಾಗಲು ಹಾಲು ಖರೀದಿ ದರವನ್ನು ಇಳಿಕೆ ಮಾಡಲಾಗಿದೆ. ಆರ್ಥಿಕ ಸ್ಥಿತಿಗತಿ ಮತ್ತು ನಷ್ಟಕ್ಕೆ ಅನುಗುಣವಾಗಿ ಆಯಾ ಹಾಲು ಒಕ್ಕೂಟಗಳು ರೈತರಿಂದ ಖರೀದಿಸುವ ಹಾಲಿನ ದರ ಪರಿಷ್ಕರಣೆ ಮಾಡಿದ್ದು, ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.