ಬೆಂಗಳೂರು: ಅಂಗನವಾಡಿ ಮಕ್ಕಳಿಗೆ ರೆಡಿ ಟು ಮಿಕ್ಸ್ ಆಹಾರ ನೀಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಇನ್ನು ಅಂಗನವಾಡಿಗಳಲ್ಲಿ ಚಿಕ್ಕಿ ಬದಲಿಗೆ ಸಿರಿಧಾನ್ಯಗಳ ಲಡ್ಡು, ಕಿಚಡಿ, ಸಾಂಬಾರ್ ಮೊದಲಾದವುಗಳನ್ನು ಫಟಾಫಟ್ ಸಿದ್ಧಪಡಿಸಿ ಮಕ್ಕಳಿಗೆ ನೀಡಬಹುದಾಗಿದೆ.
ಅಂಗನವಾಡಿಗಳಲ್ಲಿ ಗುಣಮಟ್ಟದ ಆಹಾರ ನೀಡಬೇಕೆಂಬ ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗಿದೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಸಂಸ್ಥೆ ಶಿವಮೊಗ್ಗ, ಬೆಂಗಳೂರು, ಕಲಬುರಗಿ, ಬೆಳಗಾವಿ ಜಿಲ್ಲೆಗಳ ಆಯ್ದ ಖಾಸಗಿ ಸಂಸ್ಥೆಗಳಿಗೆ ರೆಡಿ ಟು ಮಿಕ್ಸ್ ಆಹಾರ ತಯಾರಿಕೆ ಬಗ್ಗೆ ತರಬೇತಿ ನೀಡಿ ಪ್ರಯೋಗಾಲಯ ಮೂಲಕ ಪ್ರಾಮಾಣಿಕರಿಸಲಿದೆ. ಅಂತಹ ಆಹಾರ ಪದಾರ್ಥಗಳನ್ನು ಮಾತ್ರ ಅಂಗನವಾಡಿಗಳಿಗೆ ಸರಬರಾಜು ಮಾಡಲಾಗುತ್ತದೆ.
ಮೂರರಿಂದ ಆರು ವರ್ಷದೊಳಗಿನ ಮಕ್ಕಳಿಗೆ ಬೆಳಗಿನ ಉಪಹಾರಕ್ಕೆ ಬೆಲ್ಲ ಮತ್ತು ಶೇಂಗಾ ಬೀಜ ಮಿಶ್ರಿತ ಚಿಕ್ಕಿ ನೀಡಲಾಗುತ್ತಿತ್ತು. ಇದರ ಮೆನು ಬದಲಾವಣೆ ಮಾಡಲಾಗಿದ್ದು, ಬೆಲ್ಲ ಮಿಶ್ರಿತ ಪುಷ್ಟಿ ಪುಡಿ, ಸಿರಿಧಾನ್ಯಗಳ ಲಡ್ಡು ದಿನ ಬಿಟ್ಟು ದಿನ ನೀಡಲಾಗುತ್ತದೆ. ಇದರೊಂದಿಗೆ ಹಾಲು ನೀಡಲಾಗುವುದು.