ಬೆಂಗಳೂರು: ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೃಹತ್ ಪ್ರತಿಭಟನಾ ರ್ಯಾಲಿ ಆರಂಭಿಸಿದ್ದು, ರಾಜಭವನ ಚಲೋ ಮೂಲಕ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.
ಬೆಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ಕರವೇ ನಾರಾಯಣಗೌಡ ನೇತೃತ್ವದಲ್ಲಿ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಎಂಇಎಸ್ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಬೃಹತ್ ಪ್ರತಿಭಟನಾ ರ್ಯಾಲಿ ಮೂಲಕ ರಾಜಭವನ ಮುತ್ತಿಗೆ ಹಾಕಲು ನಾರಾಯಣಗೌಡ ಕರೆ ನೀಡಿದ್ದಾರೆ.
ವಿವಾಹ ಸಮಾರಂಭಗಳಿಗೂ ಇದೆ ವಿಮೆ…! ಯಾವೆಲ್ಲ ನಷ್ಟ ಕವರ್ ಆಗುತ್ತೆ ಎಂಬುದರ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ನಾರಾಯಣಗೌಡ, ದೇಶದ ಗಡಿಯಲ್ಲಿ ಪಾಕಿಸ್ತಾನ ಉಗ್ರರು ದಾಳಿ ನಡೆಸಿ ಉದ್ಧಟತನ ಮೆರೆಯುತ್ತಿದ್ದಂತೆಯೇ ರಾಜ್ಯದ ಗಡಿ ಭಾಗದಲ್ಲಿ ಎಂಇಎಸ್ ಪುಂಡರು ಭಯೋತ್ಪಾದನೆ ನಡೆಸುತ್ತಿದ್ದಾರೆ. ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ್ದಲ್ಲದೇ, ಕನ್ನಡ ಬಾವುಟಕ್ಕೂ ಅಪಮಾನ ಮಾಡಿದ್ದಾರೆ. ಕನ್ನಡಿಗರ ಮೇಲೆ ಹಲ್ಲೆ ನಡೆಸಲಾಗಿದೆ. ಎಂಇಎಸ್ ಸಂಘಟನೆಯನ್ನು ಸಂಪೂರ್ಣ ನಿಷೇಧಕ್ಕೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಪುಂಡಾಟಿಕೆ ಮೆರೆಯುತ್ತಿರುವ ಶಿವಸೇನೆ, ಎಂಇಎಸ್ ಕಾರ್ಯಕರ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಎಂಇಎಸ್ ನಿಷೇಧಕ್ಕೆ ಒತ್ತಾಯಿಸಿ ಕರ್ನಾಟಕ ಬಂದ್ ನಡೆಸಲು ನಮ್ಮ ಬೆಂಬಲವಿಲ್ಲ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗಲಿದೆ. ಈ ಕಾರಣಕ್ಕೆ ನಾವು ಎಂಇಎಸ್ ನಿಷೇಧಕ್ಕೆ ಒತ್ತಾಯಿಸಿ ಇಂದು ಬೃಹತ್ ಪ್ರತಿಭಟನಾ ಮೆರವಣಿಗೆಗೆ ಮುಂದಾಗಿದ್ದು, ರಾಜಭವನಕ್ಕೆ ಮುತ್ತಿಗೆ ಹಾಕಿ ಸರ್ಕಾರದ ಗಮನ ಸೆಳೆಯುತ್ತಿದ್ದೇವೆ ಎಂದು ಹೇಳಿದರು.