ಆಧುನಿಕ ಕ್ರಿಕೆಟ್‌ನ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್‌ರ ತವರಿನ ಅಂಗಳವಾದ ಮೆಲ್ಬರ್ನ್‌ನ ಕ್ರಿಕೆಟ್ ಮೈದಾನ (ಎಂಸಿಜಿ) ಮಾರ್ಚ್ 30ರಂದು ಅಗಲಿದ ದಂತಕಥೆಗೆ ಭಾವಪೂರ್ಣ ವಿದಾಯ ನೀಡಲು ಸಜ್ಜಾಗುತ್ತಿದೆ.
ಈ ವಿಚಾರವನ್ನು ಖುದ್ದು ಸ್ಪಷ್ಟಪಡಿಸಿದ ವಿಕ್ಟೋರಿಯಾದ ಪ್ರೀಮಿಯರ್ ಡೇನಿಯಲ್ ಆಂಡ್ರ‍್ಯೂಸ್, “ವಾರ್ನ್‌ಗೆ ಬೀಳ್ಕೊಡಲು ಮೆಲ್ಬರ್ನ್ ಕ್ರೀಡಾಂಗಣಕ್ಕಿಂತ ಸೂಕ್ತವಾದ ಜಾಗ ಜಗತ್ತಲ್ಲಿ ಬೇರೊಂದಿಲ್ಲ. ನಮ್ಮ ದೇಶಕ್ಕೆ ಶೇನ್ ನೀಡಿದ ಕೊಡುಗೆಗೆ ಪ್ರತಿಯಾಗಿ ವಿಕ್ಟೋರಿಯನ್ನರು ಆತನಿಗೆ ಹಾಗು ಆತನ ಆಟಕ್ಕೆ ಬೀಳ್ಕೊಡಲು ಮಾರ್ಚ್ 30ರಂದು ಆತನ ಸ್ಮರರ್ಣಾರ್ಥ ಸೇವೆ ಇಟ್ಟುಕೊಳ್ಳಲಾಗಿದೆ,” ಎಂದು ಟ್ವೀಟ್ ಮಾಡಿದ್ದಾರೆ.
ಮೆಚ್ಚುಗೆಗೆ ಪಾತ್ರವಾಗಿದೆ ಪೊಲೀಸ್ ಅಧಿಕಾರಿಗಳ ಮಾನವೀಯ ಕಾರ್ಯ
ಇದೇ ಎಂಸಿಜಿಯಲ್ಲಿ ಆಯೋಜಿಸಲಾಗಿದ್ದ, 1994ರ ಆಶಸ್ ಸರಣಿಯ ಪಂದ್ಯದಲ್ಲಿ ಹ್ಯಾಟ್ರಿಕ್ ಪಡೆದಿದ್ದ ವಾರ್ನ್, 2006ರ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ತಮ್ಮ ಟೆಸ್ಟ್ ವೃತ್ತಿಯ 700ನೇ ವಿಕೆಟ್ ಪಡೆದು ಈ ದಾಖಲೆ ಮಾಡಿದ ಮೊದಲ ಬೌಲರ್ ಎಂಬ ಶ್ರೇಯಕ್ಕೂ ಪಾತ್ರರಾಗಿದ್ದರು.
ಮೆಲ್ಬರ್ನ್ ವಾಸಿಯಾದ ವಾರ್ನ್ ಇದೇ ಊರಿನಲ್ಲಿ ಹುಟ್ಟಿ ಬೆಳೆದಿದ್ದಲ್ಲದೇ, ಇದೇ ವಿಕ್ಟೋರಿಯಾ ಪ್ರಾಂತ್ಯದ ಪರವಾಗಿ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿ ಆರಂಭಿಸಿದ್ದರು.
ಮಾರ್ಚ್ 4ರಂದು ಥಾಯ್ಲೆಂಡ್‌ನ ಕೋ ಸಮುಯಿನ ರೆಸಾರ್ಟ್ ಒಂದರಲ್ಲಿ ವಾರ್ನ್ ಮೃತ ಸ್ಥಿತಿಯಲ್ಲಿ ಕಂಡು ಬಂದಿದ್ದರು.