alex Certify BIG NEWS: ‘ಮೇಕೆದಾಟು’ ರಾಜಕೀಯ ಪಕ್ಷಗಳ ‘ಚುನಾವಣೆ ಆಟ’: ಹೆಚ್.ಡಿ. ಕುಮಾರಸ್ವಾಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ಮೇಕೆದಾಟು’ ರಾಜಕೀಯ ಪಕ್ಷಗಳ ‘ಚುನಾವಣೆ ಆಟ’: ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು: ಮೇಕೆದಾಟು ಯೋಜನೆ ‘ವಿವಾದ’ವನ್ನು ಕರ್ನಾಟಕ-ತಮಿಳುನಾಡು ಪರಸ್ಪರ ಚರ್ಚೆ ನಡೆಸುವ ಮೂಲಕ ಬಗೆಹರಿಸಿಕೊಳ್ಳುವಂತೆ ಕೇಂದ್ರ ಜಲಸಂಪನ್ಮೂಲ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ. ಅವರೇ ʼವಿವಾದʼ ಎನ್ನುವ ಮೂಲಕ ನಮ್ಮ ಜನರ ಕುಡಿಯುವ ನೀರಿನ ಯೋಜನೆಗೆ ʼಬಿಕ್ಕಟ್ಟಿನ ಲೇಪನʼ ಹಚ್ಚಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಎರಡೂ ರಾಜ್ಯಗಳು ಕುಳಿತು ಚರ್ಚೆ ಮಾಡಬೇಕೆಂದು ಒಮ್ಮತಕ್ಕೆ ಬರಬೇಕು ಎಂದು ಕೇಂದ್ರ ಸಚಿವರೇ ಹೇಳುವ ಮೂಲಕ, `ಮೇಕೆದಾಟು ಯೋಜನೆ ಒಕ್ಕೂಟದ ವ್ಯವಸ್ಥೆಯ ಆಶಯಕ್ಕೆ ತಕ್ಕಂತೆ ಕಾನೂನಾತ್ಮಕವಾಗಿ ನೀಡುವ ಹೊಣೆಗಾರಿಕೆಯಿಂದ ಕೇಂದ್ರ ಸರ್ಕಾರವನ್ನು ನುಣುಚಿಕೊಳ್ಳುತ್ತಿದೆ’ ಎಂದು ನನ್ನ ಸ್ಪಷ್ಟ ಅಭಿಪ್ರಾಯವಾಗಿದೆ ಎಂದು ಹೆಚ್.ಡಿ.ಕೆ. ತಿಳಿಸಿದ್ದಾರೆ.

ಮುಂಗಡ ಪತ್ರದಲ್ಲಿ ಯೋಜನೆಗೆ 1,000 ಕೋಟಿ ರೂ. ಕೊಟ್ಟೆವು ಎಂದು ಬಿಜೆಪಿ ಹಾಗೂ ನಮ್ಮ ಪಾದಯಾತ್ರೆಯಿಂದಲೇ ಹಣ ಘೋಷಿಸಲಾಯಿತು ಎಂದು ಕಾಂಗ್ರೆಸ್ ಕುಣಿಯುತ್ತಿದೆ. ಒಂದೇ ನಾಣ್ಯದ ಎರಡು ಮುಖಗಳಾದ ಎರಡೂ ರಾಷ್ಟ್ರೀಯ ಪಕ್ಷಗಳು, ಈಗ ಮೇಕೆದಾಟು ಇಟ್ಟುಕೊಟ್ಟುಕೊಂಡು `ಚುನಾವಣಾ ಆಟ` ಶುರು ಮಾಡಿವೆ ಎಂದು ಟೀಕಿಸಿದ್ದಾರೆ.

ವಾಸ್ತವ ಏನು ಎಂದು ನಾನು ಬಹಳ ಹಿಂದೆಯೇ ಹೇಳಿದ್ದೆ. ಕೇಂದ್ರದ ಕಾನೂನು ಸುಳಿಯಲ್ಲಿ ಸಿಕ್ಕಿರುವ ಹಾಗೂ ಕೇಂದ್ರದ ಜಲ ಆಯೋಗ(CWC)ದಲ್ಲಿ ಕೊಳೆಯುತ್ತಿರುವ ಮೇಕೆದಾಟು ಯೋಜನೆಯು ಪಾದಯಾತ್ರೆಯಿಂದ ಬರುವುದಿಲ್ಲ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿಯೇ ತಂದುಕೊಳ್ಳಬೇಕು ಎಂದಿದ್ದೆ. ಈಗ ಸಚಿವರಾದ ಶೇಖಾವತ್ ಅವರು; “ಮೇಕೆದಾಟು ಕುಡಿಯುವ ನೀರಿನ ಯೋಜನೆ ಬಗ್ಗೆ ಕರ್ನಾಟಕ ಉಂಟು, ತಮಿಳುನಾಡು ಉಂಟು. ನೀವೇ ಮಾತನಾಡಿಕೊಳ್ಳಿ” ಎಂದು ಕೈ ಎತ್ತಿಬಿಟ್ಟಿದ್ದಾರೆ. ಹಾಗಾದರೆ, ಯೋಜನೆಗೆ ಒಪ್ಪಿಗೆ ನೀಡಿದರೆ ಕೇಂದ್ರ ಸರ್ಕಾರದ ಪಾತ್ರವೇ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ನಮ್ಮ ಪಾಲಿನ ನೀರನ್ನು ದಕ್ಕಿಸಿಕೊಳ್ಳುವುದು ಮತ್ತು ನಮಗೆ ಕುಡಿಯುವ ನೀರು ಕೊಡುವ ಮೇಕೆದಾಟು ಯೋಜನೆ ಅನುಷ್ಠಾನ ಮಾಡುವುದು ಕರ್ನಾಟಕದ ಹಕ್ಕು. ಆದರೆ, ಕೇಂದ್ರ ಸಚಿವರು ʼನೀವೇ ಬಗೆಹರಿಸಿಕೊಳ್ಳಿ’ ಎಂದು ಹೇಳಿದ ಒಳಮರ್ಮವೇನು? ಕಾವೇರಿ ಬಗ್ಗೆ ಬಿಜೆಪಿ ʼಹೊಸ ವರಸೆʼ ಶುರು ಮಾಡಿತೇ ಎನ್ನುವ ಸಂಶಯ ನನ್ನದು ಎಂದು ತಿಳಿಸಿದ್ದಾರೆ.

ಈ ಬಗ್ಗೆ; 1,000 ಕೋಟಿ ಹಣ ಘೋಷಣೆ ಮಾಡಿದೊಡನೆ ಪಾದಯಾತ್ರೆಯಿಂದಲೇ ಆಯಿತು ಎಂದು `ಹಿಗ್ಗಿ ಹೀರೆಕಾಯಿ~ ಆಗಿದ್ದ ಕಾಂಗ್ರೆಸ್ ನಿಲುವೇನು? ಅವರೀಗ ತಮ್ಮ ಮಿತ್ರಪಕ್ಷ ಡಿಎಂಕೆ ಅಧಿಕಾರದಲ್ಲಿರುವ ತಮಿಳುನಾಡು ಸರಕಾರದ ಜತೆ ಮಾತುಕತೆ ನಡೆಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಾರಾ? ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...