10 ವರ್ಷದ ಹಿಂದೆ ಬ್ಯಾಟಿಂಗ್ ಗ್ಲೌಸ್ ತೆಗೆದುಕೊಳ್ಳಲು ಹಣವಿಲ್ಲದೇ ಆರ್ಥಿಕ ಸಂಕಷ್ಟದಲ್ಲಿದ್ದ ಬ್ಯಾಟರ್ ಇಂದು 5.8 ಕೋಟಿ ರೂಪಾಯಿಗೆ ಹರಾಜಾಗಿದ್ದಾರೆಂದರೆ ಅವರ ಪ್ರಗತಿ ಬಗ್ಗೆ ಮೆಚ್ಚಲೇಬೇಕು. ಇದು ಶುಭಂ ದುಬೆ ಅವರ ಯಶೋಗಾಥೆ.
ಮಹಾರಾಷ್ಟ್ರದ ನಾಗಪುರದಲ್ಲಿನ ಕಮಲ್ ಸ್ಕ್ವೇರ್‌ನಲ್ಲಿ ಶುಭಂ ದುಬೆಯವರ ತಂದೆ ಪಾನ್ ಅಂಗಡಿ ನಡೆಸುತ್ತಾರೆ. ಇದರಿಂದ ಬಂದ ಹಣದಿಂದ ಅವರ ಕುಟುಂಬ ಜೀವನ ಸಾಗಿಸಬೇಕಿತ್ತು. ಇದೀಗ ಶುಭ ದುಬೆ 2024ರ ಐಪಿಎಲ್ ನಲ್ಲಿ ಆಡಲಿದ್ದು 5.8 ಕೋಟಿ ರೂಪಾಯಿಗೆ ರಾಜಸ್ತಾನ ರಾಯಲ್ಸ್ ಅವರನ್ನು ಖರೀದಿಸಿದೆ. ಈ ಶುಭ ಸುದ್ದಿ ತಿಳಿದು ಶುಭಂ ಮತ್ತು ಅವರ ಕುಟುಂಬದವರು ಸಂತಸಪಟ್ಟಿದ್ದಾರೆ.
“ಇದು ಅವಾಸ್ತವಿಕ ಭಾವನೆ. ನಾನು ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT) ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇನೆ. ಹಾಗಾಗಿ ನಾನು ಹರಾಜಿನಲ್ಲಿ ಆಯ್ಕೆಯಾಗುವ ಭರವಸೆ ಹೊಂದಿದ್ದೆ. ಆದರೂ ನಾನು ಇಷ್ಟು ದೊಡ್ಡ ಮೊತ್ತವನ್ನು ನಿರೀಕ್ಷಿಸಿರಲಿಲ್ಲ” ಎಂದು ದುಬೆ ಹೇಳಿದರು. ಶುಭಂ ದುಬೆ ಆಯ್ಕೆಯಾದ ಬಳಿಕ ಮಂಗಳವಾರ ಸಂಜೆ ಕಮಲ್ ಸ್ಕ್ವೇರ್‌ನಲ್ಲಿರುವ ದುಬೆ ಕುಟುಂಬದ ನಿವಾಸಕ್ಕೆ ಹಿತೈಷಿಗಳ ದಂಡೇ ಬಂದಿತ್ತು.
27 ವರ್ಷದ ಶುಭಂ ದುಬೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಏಳು ಪಂದ್ಯಗಳಲ್ಲಿ 187.28 ಸ್ಟ್ರೈಕ್ ರೇಟ್ ಮತ್ತು 73.76 ರ ಸರಾಸರಿಯಲ್ಲಿ 222 ರನ್ ಗಳಿಸಿದರು. 10 ಬೌಂಡರಿ ಮತ್ತು 18 ಸಿಕ್ಸರ್‌ಗಳನ್ನು ಬಾರಿಸಿ ಅತ್ಯುತ್ತಮ ಪ್ರದರ್ಶನ ನೀಡಿದರು.
ತಮ್ಮ ಕ್ರಿಕೆಟ್ ಕೆರಿಯರ್ ನಲ್ಲಿ ಕಷ್ಟಕಾಲದಲ್ಲಿ ಸಹಾಯ ಮಾಡಿದ ಮೆಂಟರ್ ದಿವಂಗತ ಸುದೀಪ್ ಜೈಸ್ವಾಲ್ ಅವರನ್ನು ದುಬೆ ನೆನಪಿಸಿಕೊಂಡರು.
“ಕ್ರಿಕೆಟ್ ಗೆ ಬಂದ ಆರಂಭದ ಸಮಯದಲ್ಲಿ ನಮ್ಮ ಆರ್ಥಿಕ ಸ್ಥಿತಿ ತುಂಬಾ ಕೆಟ್ಟದಾಗಿತ್ತು. ಸುದೀಪ್ ಸರ್ ನನಗೆ ತುಂಬಾ ಸಹಾಯ ಮಾಡಿದರು. ಅವರ ಬೆಂಬಲವಿಲ್ಲದಿದ್ದರೆ ನಾನು ನನ್ನ ಜೀವನದಲ್ಲಿ ಏನನ್ನೂ ಸಾಧಿಸುತ್ತಿರಲಿಲ್ಲ. ಅವರಿಲ್ಲದಿದ್ದರೆ ನಾನು ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಗೆ ಕೊಡುಗೆ ನೀಡಲು ಆಗುತ್ತಿರಲಿಲ್ಲ” ಎಂದು ದುಬೆ ತಮ್ಮ ಮಾರ್ಗದರ್ಶಕ ದಿವಂಗತ ಸುದೀಪ್ ಜೈಸ್ವಾಲ್ ಅವರನ್ನ ನೆನಪಿಸಿಕೊಂಡರು.
ನನಗೆ ಗ್ಲೌಸ್ ಕೂಡ ಖರೀದಿಸಲು ಸಾಧ್ಯವಾಗಲಿಲ್ಲ. ಸುದೀಪ್ ಜೈಸ್ವಾಲ್ ಸರ್ ನನಗೆ ಹೊಸ ಬ್ಯಾಟ್ ಮತ್ತು ಕಿಟ್ ನೀಡಿದರು. ಅವರು ನನ್ನನ್ನು ಟಾಪ್ 11 ಸದಸ್ಯರ ಅಂಡರ್-19, ಅಂಡರ್-23 ತಂಡಗಳಿಗೆ ಸೇರಿಸಿದರು ಎಂದರು. ಇದೇ ಸಂದರ್ಭದಲ್ಲಿ ತಮ್ಮ ಬಾಲ್ಯದ ಕೋಚ್ ರೋಹಿತ್ ಕೇಸರ್ವರ್‌ಗೆ ದುಬೆ ಧನ್ಯವಾದಗಳನ್ನು ಅರ್ಪಿಸಿದರು.