ಕಡುಬಡತನದಲ್ಲೂ ಛಲ ಬಿಡದೆ ಐಎಎಸ್ ಪಾಸ್; ಇಲ್ಲಿದೆ ಎಲ್ಲರಿಗೂ ಸ್ಪೂರ್ತಿಯಾಗುವ ಯುವಕನ ಯಶೋಗಾಥೆ 19-07-2022 10:12AM IST / No Comments / Posted In: India, Featured News, Live News, Special ಐಎಎಸ್, ಐಪಿಎಸ್, ಐಆರ್ಎಸ್ ಸೇವೆ ಸಲ್ಲಿಸಬೇಕೆಂದು ದೇಶದಲ್ಲಿ ಪ್ರತಿ ವರ್ಷ ಲಕ್ಷಾಂತರ ಯುವಕರು ಆಸೆಹೊತ್ತು ಪ್ರಯತ್ನ ನಡೆಸುತ್ತಾರೆ. ಬಹಳಷ್ಟು ಜನರು ತಮ್ಮ ಕನಸುಗಳನ್ನು ನನಸಾಗಿಸುವ ಸೂಕ್ತ ಸವಲತ್ತು ಹೊಂದಿಲ್ಲದ ಕಾರಣ ಆಸೆಗಳನ್ನು ಬಿಟ್ಟುಬಿಡಬೇಕಾಗುತ್ತದೆ. ಯುಪಿಎಸ್ಸಿ ಪರೀಕ್ಷೆಗೆ ಕೋಚಿಂಗ್ ಬಹಳ ಮುಖ್ಯ ಎಂಬುದು ಹಿಂದಿನಿಂದಲೂ ಅಭಿಪ್ರಾಯವಿದೆ. ಆದರೆ, ಇಲ್ಲೊಬ್ಬರು ಕೋಚಿಂಗ್ ಇಲ್ಲದೇ ತಮ್ಮ ಸ್ವಂತ ಪರಿಶ್ರಮದಿಂದ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಗಮನ ಸೆಳೆದಿದ್ದಾರೆ. ಉತ್ತರಾಖಂಡದ ಸಿತಾರ್ಗಂಜ್ ಜಿಲ್ಲೆಯ ಐಎಎಸ್ ಅಧಿಕಾರಿ ಹಿಮಾಂಶು ಗುಪ್ತಾ ಯುಪಿಎಸ್ಸಿ ಆಕಾಂಕ್ಷಿಗಳಿಗೆ ಸ್ಫೂರ್ತಿಯಾಗಿದ್ದಾರೆ. ಏಕೆಂದರೆ ಅವರು ಬಡತನ ಮತ್ತು ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದರೂ, ಯುಪಿಎಸ್ಸಿ ಪರೀಕ್ಷೆಯನ್ನು ಭೇದಿಸಿ ಯಶಸ್ವಿಯಾಗಿದ್ದಾರೆ. ಉತ್ತರಾಖಂಡದ ಸಿತಾರ್ಗಂಜ್ ಜಿಲ್ಲೆಯವರಾದ ಹಿಮಾಂಶು ಗುಪ್ತಾ ಬಾಲ್ಯದಿಂದಲೂ ಬುದ್ಧಿವಂತರಾಗಿದ್ದರು. ಅವರ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ. ಅವರ ತಂದೆ ದಿನಗೂಲಿ ಕೆಲಸಗಾರರಾಗಿದ್ದರು. ಅವರು ತರುತ್ತಿದ್ದ ಆದಾಯ ಕುಟುಂಬದ ಅಗತ್ಯಗಳಿಗೆ ಸಾಕಾಗುತ್ತಿರಲಿಲ್ಲ. ಹಿಮಾಂಶುವಿನ ತಂದೆ ಟೀ ಸ್ಟಾಲ್ ಅನ್ನು ಪ್ರಾರಂಭಿಸಲು ನಿರ್ಧರಿಸಿದರು, ಅಲ್ಲಿ ಹಿಮಾಂಶು ತನ್ನ ಶಾಲಾ ಸಮಯದ ನಂತರ ಟೀ ಸ್ಟಾಲ್ನಲ್ಲಿ ತನ್ನ ತಂದೆಗೆ ಸಹಾಯ ಮಾಡುತ್ತಿದ್ದರು. ಮುಂದೆ ಅವರ ಅಜ್ಜಿ ವಾಸಿಸುತ್ತಿದ್ದ ಬರೇಲಿಯ ಶಿವಪುರಿಗೆ ಸ್ಥಳಾಂತರಗೊಂಡರು, ಅಲ್ಲಿನ ಸ್ಥಳಿಯ ಸರ್ಕಾರಿ ಶಾಲೆಗೆ ಸೇರಿಸಲಾಯಿತು. ಹಿಮಾಂಶು ದೆಹಲಿ ವಿಶ್ವವಿದ್ಯಾನಿಲಯದ ಕಾಲೇಜಿಗೆ ಪ್ರವೇಶ ಪಡೆದರು ಮತ್ತು ಟ್ಯೂಷನ್ ತೆಗೆದುಕೊಂಡು ಬ್ಲಾಗ್ ಬರೆಯುವ ಮೂಲಕ ತಮ್ಮ ಶುಲ್ಕವನ್ನು ಪಾವತಿಸಿದರು. ಇಂಗ್ಲಿಷ್ ಶಿಕ್ಷಣಕ್ಕಾಗಿ ಪ್ರತಿದಿನ 70 ಕಿಮೀ ಪ್ರಯಾಣಿಸಬೇಕಾಗಿತ್ತು. ಮುಂದೆ ಅವರು ಪರಿಸರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರಲ್ಲದೇ ಬ್ಯಾಚ್ನಲ್ಲಿ ಅಗ್ರಸ್ಥಾನ ಪಡೆದರು. ವಿದೇಶದಲ್ಲಿ ಪಿಎಚ್ಡಿ ಮಾಡಲು ಆಯ್ಕೆಯನ್ನು ಹೊಂದಿದ್ದರೂ ಭಾರತದಲ್ಲಿ ಉಳಿಯಲು ತೀರ್ಮಾನಿಸಿ ಯುಪಿಎಸ್ಸಿಗೆ ಪ್ರಯತ್ನ ಆರಂಭಿಸಿದರು. ಈ ನಡುವೆ ಕುಟುಂಬದ ಅಗತ್ಯತೆಗಳನ್ನು ಪೂರೈಸಲು ಹಿಮಾಂಶು ಸರ್ಕಾರಿ ಕಾಲೇಜಿನಲ್ಲಿ ಸಂಶೋಧನಾ ವಿದ್ಯಾಥಿರ್ಯಾಗಿ ಸೇರಿಕೊಂಡರು. ಮೂರು ಬಾರಿ ಯುಪಿಎಸ್ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಗೆ ಪ್ರಯತ್ನಿಸಿದ್ದು, ಮೊದಲ ಪ್ರಯತ್ನದಲ್ಲಿ ಅರ್ಹತೆ ಪಡೆದರೂ ಐಆರ್ಟಿಸಿಗೆ ಆಯ್ಕೆಯಾದರು. ಅವರು ತಮ್ಮ ತಯಾರಿಯನ್ನು ಮುಂದುವರೆಸಿದ್ದು ಮತ್ತು 2019ರಲ್ಲಿ ಐಪಿಎಸ್ಗೆ ಆಯ್ಕೆಯಾಗಲು ಸಾಧ್ಯವಾಯಿತು. ಆದರೆ, ಮೂರನೇ ಬಾರಿ ಐಎಎಸ್ಗೆ ಅರ್ಹತೆ ಪಡೆದುಕೊಂಡರು. ಅವರ ಈ ಕಠಿಣ ಪರಿಶ್ರಮ ಮತ್ತು ಎಂದಿಗೂ ಬಿಟ್ಟುಕೊಡದ ಮನೋಭಾವ ಎಲ್ಲರಿಗೂ ಸ್ಫೂರ್ತಿಯಾಗಿದೆ. ಗಮನಿಸಬೇಕಾದ ಪ್ರಮುಖ ಸಂಗತಿ ಎಂದರೆ ಅವರು ಕೋಚಿಂಗ್ ಪಡೆದಿಲ್ಲ. ಸ್ವಂತ ಪರಿಶ್ರಮವೇ ಅವರನ್ನು ಗುರಿ ಮುಟ್ಟಿಸಿದೆ.