ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಕಾರಣದಿಂದ ಶಾಲೆ ಆರಂಭ ವಿಳಂಬವಾಗಿದ್ದು, 9 ಮತ್ತು 10 ನೇ ತರಗತಿಗಳು ಪೂರ್ಣಪ್ರಮಾಣದಲ್ಲಿ ಆರಂಭವಾಗಿವೆ.
ಒಂದರಿಂದ ಎಂಟನೇ ತರಗತಿ ಇನ್ನೂ ಆರಂಭವಾಗಿಲ್ಲ. ಮಕ್ಕಳಿಗೆ ಬಿಸಿಯೂಟದ ಬದಲು ಆಹಾರಧಾನ್ಯ ವಿತರಿಸಲು ಸರ್ಕಾರ ಕ್ರಮಕೈಗೊಂಡಿದ್ದರೂ, ಮಕ್ಕಳಿಗೆ ಅಗತ್ಯವಿರುವ ಆಹಾರಧಾನ್ಯ ಖರೀದಿಸಿ ಸರಬರಾಜು ಪ್ರಕ್ರಿಯೆ ವಿಳಂಬವಾಗಿತ್ತು.
ಈಗ ಸಾರ್ವಜನಿಕ ಶಿಕ್ಷಣ ಇಲಾಖೆ ಅಕ್ಷರ ದಾಸೋಹ ಯೋಜನೆಯಡಿ ಶೀಘ್ರದಲ್ಲೇ ಮಕ್ಕಳಿಗೆ ಆಹಾರ ಧಾನ್ಯಗಳನ್ನು ವಿತರಿಸಲು ಮುಂದಾಗಿದೆ. ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಒಂದರಿಂದ 10ನೇ ತರಗತಿ ಮಕ್ಕಳಿಗೆ ಬಿಸಿಯೂಟದ ಬದಲಾಗಿ ಆಹಾರಧಾನ್ಯ ವಿತರಿಸಲಾಗುವುದು ಎಂದು ಹೇಳಲಾಗಿದೆ.
9,10 ನೇ ತರಗತಿ ಮಕ್ಕಳಿಗೆ ಶಾಲೆ ಆರಂಭವಾಗಿದ್ದರೂ, ಬಿಸಿಯೂಟ, ಆಹಾರಧಾನ್ಯ, ಕ್ಷೀರಭಾಗ್ಯವೂ ಬಂದ್ ಆಗಿರುವುದರಿಂದ ಮಕ್ಕಳಿಗೆ ಸಮಸ್ಯೆಯಾಗಿದೆ ಎನ್ನುವ ದೂರುಗಳು ಕೇಳಿಬಂದಿದ್ದವು. ಮಕ್ಕಳಿಗೆ ಬಿಸಿಯೂಟದ ಬದಲಿಗೆ ಆಹಾರ ಭದ್ರತಾ ಭತ್ಯೆಯಂತೆ ಆಹಾರ ಧಾನ್ಯಗಳನ್ನು ವಿತರಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.