ಬೆಂಗಳೂರು: ಕೊರೋನಾ ಕಾರಣದಿಂದಾಗಿ ಶಾಲೆ ಆರಂಭ ವಿಳಂಬವಾಗಿದೆ. ಆದರೆ, ಆರಂಭವಾಗಿರುವ ಶಾಲೆಯ ಮಕ್ಕಳಿಗೆ ಬಿಸಿಯೂಟ ಇಲ್ಲದಂತಾಗಿದೆ.
ಈಗಾಗಲೇ 9,10 ನೇ ತರಗತಿ ಮಕ್ಕಳಿಗೆ ಶಾಲೆ ಆರಂಭವಾಗಿದ್ದರೂ, ಊಟ, ಆಹಾರಧಾನ್ಯ ಇಲ್ಲವಾಗಿದ್ದು ಕ್ಷೀರಭಾಗ್ಯವೂ ಬಂದ್ ಆಗಿರುವುದರಿಂದ ಮಕ್ಕಳಿಗೆ ಸಮಸ್ಯೆಯಾಗಿದೆ ಎನ್ನುವ ದೂರುಗಳು ಕೇಳಿಬಂದಿವೆ.
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧಿಕಾರಿಗಳ ನಿರ್ಲಕ್ಷದಿಂದ ಟೆಂಡರ್ ಪ್ರಕ್ರಿಯೆ ಶುರುವಾಗಿಲ್ಲ. ಅಕ್ಕಿ, ಗೋಧಿ ಸರಬರಾಜು ಆಗಿದೆ. ಆದರೆ, ಅಡುಗೆ ಎಣ್ಣೆ, ಉಪ್ಪು, ತೊಗರಿಬೇಳೆ ವಿತರಣೆಯಾಗಿಲ್ಲ. ಟೆಂಡರ್ ಪ್ರಕ್ರಿಯೆ ನಡೆಯದ ಕಾರಣ ಧಾನ್ಯಗಳ ಹಂಚಿಕೆಯಾಗಿಲ್ಲ ಎಂದು ಹೇಳಲಾಗಿದೆ.
ಮಕ್ಕಳಿಗೆ ಬಿಸಿಯೂಟದ ಬದಲಿಗೆ ಆಹಾರ ಭದ್ರತಾ ಭತ್ಯೆಯಂತೆ ಆಹಾರ ಧಾನ್ಯಗಳನ್ನು ವಿತರಿಸಲು ಸರ್ಕಾರ ಕ್ರಮ ಕೈಗೊಂಡಿತ್ತು. ಈಗ ಶಾಲೆ ಆರಂಭದ ನಂತರ ಬಿಸಿಯೂಟದ ನಿರೀಕ್ಷೆಯಲ್ಲಿದ್ದ ಮಕ್ಕಳಿಗೆ ಬಿಸಿಯೂಟ ಇಲ್ಲದಂತಾಗಿದೆ ಎಂದು ಹೇಳಲಾಗಿದೆ.