ಮಣಿಪುರದ ಚುರಾಚಂದ್ ಜಿಲ್ಲೆಯ ಸಿಂಘತ್ ಉಪವಿಭಾಗದಲ್ಲಿರುವ ಆಸ್ಸಾಂ ರೈಫಲ್ಸ್ ಘಟಕದ ಕಮಾಂಡಿಂಗ್ ಆಫೀಸರ್ರ ಬೆಂಗಾವಲು ಪಡೆಯ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ಇದರಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ಆಸ್ಸಾಂ ರೈಫಲ್ಸ್ ಕಮಾಂಡಿಂಗ್ ಅಧಿಕಾರಿಯ ಬೆಂಗಾವಲು ಪಡೆಯ ಮೇಲೆ ಸಿಂಘಾತ್ ಉಪನಗರದಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ದಾಳಿ ನಡೆಸುವ ವೇಳೆಯಲ್ಲಿ ಅಧಿಕಾರಿಯು ತನ್ನ ಕುಟುಂಬಸ್ಥರು ಹಾಗೂ ಕ್ವಿಕ್ ರಿಯಾಕ್ಷನ್ ತಂಡದ ಜೊತೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಭಯೋತ್ಪಾದಕರ ಈ ದಾಳಿಯನ್ನು ಮಣಿಪುರ ಸಿಎಂ ನೊಂಗ್ತೊಂಬಮ್ ಬಿರೇನ್ ಸಿಂಗ್ ಕಟುವಾಗಿ ಟೀಕಿಸಿದ್ದಾರೆ. ಭಯೋತ್ಪಾದಕರ ಈ ಹೇಡಿ ಕೃತ್ಯಕ್ಕೆ ಪ್ರತೀಕಾರ ತೀರಿಸಿಕೊಳ್ಳದೇ ಬಿಡುವುದಿಲ್ಲ ಎಂದೂ ಹೇಳಿದ್ದಾರೆ. ತಪ್ಪಿತಸ್ಥರ ವಿರುದ್ಧ ಶೀಘ್ರದಲ್ಲೇ ಕ್ರಮ ಜರುಗಿಸುವ ಬಗ್ಗೆ ಅಭಯ ನೀಡಿದ್ದಾರೆ.
ಇದೊಂದು ಅಮಾನವೀಯ ಭಯೋತ್ಪಾದಕ ಕೃತ್ಯವಾಗಿದ್ದು, ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ಮೌನವಾಗಿರಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.