ಡೀಸೆಲ್ ಕಳವು ಮಾಡಿದಾತನೊಬ್ಬ ಸಾಕ್ಷ್ಯ ನಾಶ ಮಾಡಲು ಹೋಗಿ ಅಪಾರ ಮೌಲ್ಯದ ಕಾಡನ್ನೇ ನಾಶ ಮಾಡಿದ್ದು, ಆತನಿಗೆ ಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ.
ಈ ಘಟನೆ ನಡೆದಿರುವುದು, ಆಸ್ಟ್ರೇಲಿಯಾದಲ್ಲಿ. ವಿಕ್ಟೋರಿಯಾದ ಹ್ಯಾಂಗಿಂಗ್ ರಾಕ್ ಬಳಿ ಲಾಗಿಂಗ್ ಅಗೆಯುವ ಯಂತ್ರದಿಂದ 2019 ರಲ್ಲಿ ವ್ಯಕ್ತಿ ತನ್ನ ಸಹಚರನೊಂದಿಗೆ 200 ಲೀಟರ್ ಡೀಸೆಲ್ ಇಂಧನವನ್ನು ಕದ್ದಿದ್ದ.
ಆ ಪ್ರದೇಶದಿಂದ ಹೊರಡುವ ಮೊದಲು ಡೀಸೆಲ್ ಕಳ್ಳತನದ ಸುಳಿವು ಸಿಗಬಾರದೆಂದು ಆತ
ಸಿಗರೇಟ್ ಲೈಟರ್ನ ಸಹಾಯದಿಂದ ಉಳಿದ ಇಂಧನವನ್ನು ಉರಿಸಿದ್ದ. ಇದು ನಿಯಂತ್ರಣಕ್ಕೆ ಸಿಗದೇ ಕಾಡ್ಗಿಚ್ಚಿಗೆ ಕಾರಣವಾಯಿತು. ಆ ಪ್ರದೇಶದ ಸುಮಾರು 1,042 ಹೆಕ್ಟೇರ್ ಅರಣ್ಯ ನಾಶಪಡಿಸಿತು. ಹಾನಿಯ ಅಂದಾಜು ವೆಚ್ಚವು 1.1ರಿಂದ 1.7 ಮಿಲಿಯನ್ ಡಾಲರ್ಗಳೆಂದು ಅಂದಾಜಿಸಲಾಗಿದೆ.
ಈ ಹಾನಿಯನ್ನು ಆ ಇಂಧನ ಕಳ್ಳ ಒಪ್ಪಿಕೊಂಡ. ಆದರೆ, ತನ್ನ ಉದ್ದೇಶದ ಬಗ್ಗೆಯೂ ಸ್ಪಷ್ಟನೆ ನೀಡಿ ವಿಷಾದಿಸಿದ. ಆದರೆ, ಕೋರ್ಟ್ ಆತನ ಅಹವಾಲು ತಿರಸ್ಕರಿಸಿದೆ.
ಈ ಕಳ್ಳತನ ಮಾಡುವಾಗ ಆ ವ್ಯಕ್ತಿಗೆ ಕೇವಲ 17 ವರ್ಷ. ಅಪರಾಧದ ಸಮಯದಲ್ಲಿ ಅಪ್ರಾಪ್ತನಾಗಿದ್ದ ಕಾರಣ ನ್ಯಾಯಾಧೀಶರು ಆತನಿಗೆ 12 ತಿಂಗಳ ಜೈಲು ಶಿಕ್ಷೆ ವಿಧಿಸಿದ್ದು, ಹಾಗೆಯೇ ಐದು ತಿಂಗಳಲ್ಲಿ ಪೆರೋಲ್ಗೆ ಅರ್ಹನಾಗಿದ್ದಾನೆ.