ಈಗ ಜಗತ್ತಿನಾದ್ಯಂತ ಮಹಾನಗರಗಳಲ್ಲಿ ಮೊಬೈಲ್ ಅಪ್ಲಿಕೇಶನ್ ಆಧಾರಿತ ಸಾರಿಗೆ ಸೇವೆ ಹೆಚ್ಚು ಪ್ರಚಲಿತದಲ್ಲಿದೆ. ಇದರ ಬಳಕೆಯೂ ಜನರಿಗೆ ಹೆಚ್ಚು ಆಪ್ಯಾಯಮಾನವಾಗಿದೆ. ಆದರೆ, ಅದರಲ್ಲೊಂದಿಷ್ಟು ಸಮಸ್ಯೆಯೂ ಕಾಣಿಸಿದೆ.
ಇಲ್ಲೊಂದು ಪ್ರಕರಣದಲ್ಲಿ 15 ನಿಮಿಷಗಳ ಉಬರ್ ರೈಡ್ಗೆ 32 ಲಕ್ಷ ರೂ. ಬಿಲ್ ಆದ ಆಶ್ಚರ್ಯಕರ ಪ್ರಸಂಗವೊಂದು ನಡೆದಿದೆ.
ಹ್ಯಾಂಗೋವರ್ನಲ್ಲಿದ್ದ ವ್ಯಕ್ತಿ ಎಚ್ಚರಗೊಂಡು ತನ್ನ ಉಬರ್ ಅಪ್ಲಿಕೇಶನ್ 39,317 ಡಾಲರ್ (ಭಾರತೀಯ ಕರೆನ್ಸಿಯಲ್ಲಿ ಅಂದಾಜು 32 ಲಕ್ಷ ರೂ.) ಬಿಲ್ ಅನ್ನು ತೋರಿಸಿದೆ ಎಂದು ತಿಳಿದು ಶಾಕ್ ಆಗಿದ್ದರು.
ವೃತ್ತಿಯಲ್ಲಿ ಅಡುಗೆ ತಯಾರಕನಾದ 22 ವರ್ಷ ವಯಸ್ಸಿನ ಆಲಿವರ್ ಕಪ್ಲಾನ್ ಎಂಬಾತ ಇಂಗ್ಲೆಂಡ್ನ ಮ್ಯಾಂಚೆಸ್ಟರ್ನಲ್ಲಿರುವ ಬಕ್ಸ್ಟನ್ ಇನ್ನಲ್ಲಿ ತನ್ನ ಕೆಲಸವನ್ನು ಮುಗಿಸಿದ ನಂತರ ಉಬರ್ ರೈಡ್ ಅನ್ನು ಬುಕ್ ಮಾಡಿದ್ದಾರೆ. ತಮ್ಮ ಕೆಲಸದ ಸ್ಥಳದಿಂದ ಕೇವಲ ನಾಲ್ಕು ಮೈಲುಗಳಷ್ಟು ದೂರದಲ್ಲಿರುವ ವಿಚ್ವುಡ್ನಲ್ಲಿರುವ ಪಬ್ನಲ್ಲಿ ಸ್ನೇಹಿತರನ್ನು ಭೇಟಿ ಮಾಡಲು ಪ್ಲಾನ್ ಮಾಡಿದ್ದರು.
ರೈಡ್ ಅನ್ನು ಬುಕ್ ಮಾಡುವಾಗ ಅಪ್ಲಿಕೇಶನ್ ತನ್ನ ದರವನ್ನು 11-12 ಡಾಲರ್ ನಡುವೆ ಉಲ್ಲೇಖಿಸಿದೆ, ಅದನ್ನು ಅವರು ಒಪ್ಪಿದ್ದರು. ಉಬರ್ ಚಾಲಕ ಆತನನ್ನು ಪಬ್ಗೆ ಡ್ರಾಪ್ ಮಾಡಿದ. ಅಲ್ಲಿವರೆಗೂ ಅದು ಸಾಮಾನ್ಯ ಉಬರ್ ಡ್ರೈವ್ ಎನಿಸಿದ್ದರೂ, ಟ್ರಿಪ್ ಮುಗಿದ ಮೇಲೆ ಆತನಿಗೆ ಗೊತ್ತಾಗಿದ್ದು ಅದು ದುಬಾರಿ ರೈಡ್ ಎಂದು. ವ್ಯಾಲೆಟ್ನಲ್ಲಿ ಸಾಕಷ್ಟು ಹಣವಿಲ್ಲದ ಕಾರಣ ಮೊತ್ತವನ್ನು ಕಡಿತಗೊಳಿಸಲಾಗಲಿಲ್ಲ ಎಂದು ಎಚ್ಚರಿಸುವ ಅಧಿಸೂಚನೆ ಬಂದಿತ್ತು.
ಮರುದಿನ ಬೆಳಿಗ್ಗೆ ಹ್ಯಾಂಗ್ ಓವರ್ನಿಂದ ಎಚ್ಚರಗೊಂಡಾಗ 39,317 ಡಾಲರ್ ಬಿಲ್ ಆಗಿರುವುದನ್ನು ಖಚಿತಪಡಿಸಿಕೊಂಡಾತ ತಕ್ಷಣ ಉಬರ್ ಅಪ್ಲಿಕೇಶನ್ನ ಗ್ರಾಹಕ ಸೇವಾ ವಿಭಾಗವನ್ನು ಸಂಪರ್ಕಿಸಿದರು.
ಅಸಾಮಾನ್ಯ ಬಿಲ್ಲಿಂಗ್ ಉಬರ್ ಉದ್ಯೋಗಿಗೆ ಕೂಡ ಆಶ್ಚರ್ಯವನ್ನುಂಟು ಮಾಡಿದೆ. ಉಬರ್ ಸಪೋರ್ಟಿಂಗ್ ಟೀಂ ಈ ವಿಷಯವನ್ನು ತನಿಖೆ ಮಾಡಿ, ಅಪ್ಲಿಕೇಶನ್ನಲ್ಲಿನ ಅನಿರೀಕ್ಷಿತ ದೋಷದಿಂದಾಗಿ ವ್ಯಕ್ತಿಯ ಡ್ರಾಪ್-ಆಫ್ ಸ್ಥಳವನ್ನು ಆಸ್ಟ್ರೇಲಿಯಾಕ್ಕೆ ಬದಲಾಯಿಸಲಾಗಿತ್ತು ಎಂದು ಕಂಡುಹಿಡಿಯಲಾಯಿತು.
ದೋಷದ ಹಿಂದಿನ ನಿಖರವಾದ ಕಾರಣ ಗುರುತಿಸಲಾಗಲಿಲ್ಲ ಆದರೆ ಕಂಪನಿಯು ಅವನ ಸ್ಥಳವನ್ನು ಮ್ಯಾಂಚೆಸ್ಟರ್ನ ವಿಚ್ವುಡ್ನಿಂದ ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿರುವ ಅದೇ ಹೆಸರಿನ ಸ್ಥಳಕ್ಕೆ ಬದಲಾಯಿಸಲಾಗಿದೆ ಎಂದು ಹೇಳಿಕೊಂಡಿದೆ.
ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಲ್ಲದ ಕಾರಣ, ಕಡಿತಗೊಳಿಸಲು ಅಪ್ಲಿಕೇಶನ್ಗೆ ಸಾಧ್ಯವಾಗಲಿಲ್ಲ. ಆದರೆ ತನ್ನ ಬ್ಯಾಂಕ್ ಖಾತೆಯಲ್ಲಿ ನಿಜವಾಗಿ ಅಂತಹ ಹಣವನ್ನು ಹೊಂದಿದ್ದರೆ ಪರಿಸ್ಥಿತಿ ತುಂಬಾ ಕೆಟ್ಟದಾಗಿರುತ್ತಿತ್ತು ಎಂದು ಆ ಪ್ರಯಾಣಿಕ ಕಳವಳ ವ್ಯಕ್ತಪಡಿಸಿದ್ದಾರೆ.