ಮಗುವಿನ ಜನನ ಯಾವುದೇ ದಂಪತಿಗಳ ಪಾಲಿನ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದು. ತಮ್ಮ ಮಗುವಿನ ಜನನದ ದಿನದಂದು ಬೇರಾವುದೇ ಕೆಲಸವಿದ್ದರೂ ಸರಿ ತಮ್ಮ ಸಂಗಾತಿಯೊಂದಿಗೆ ಆಸ್ಪತ್ರೆಯಲ್ಲಿ ಕಳೆಯುವುದು ಬಹುತೇಕ ಪತಿಯರ ಆದ್ಯತೆಯಾಗಿರುತ್ತದೆ.
ಆದರೆ ಇಲ್ಲೊಬ್ಬ ಪತಿ ಮಹಾಶಯನಿಗೆ ತನ್ನ ಹೆಂಡತಿಯ ಪ್ರಸವ ವೇದನೆಗಿಂತ ಮ್ಯಾಕ್‌ಡೊನಾಲ್ಡ್ಸ್ ಬರ್ಗರ್ ಮುಖ್ಯವಾಗಿದೆ ಎಂದು ದೂರಿದ ಪತ್ನಿಯೊಬ್ಬರು ಆತನಿಗೆ ವಿಚ್ಛೇದನ ನೀಡಿದ್ದಾರೆ.
ಮಗುವಿನ ನಿರೀಕ್ಷೆಯಲ್ಲಿದ್ದ ಈ ಪತಿ, ಸಿಸೇರಿಯನ್ ಮಾಡಬೇಕಾದ ಪರಿಸ್ಥಿತಿ ಬಂದರೆ ಇರಲಿ ಎಂಬ ಕಾರಣಕ್ಕೆ ಹಸಿದುಕೊಂಡೇ ಇದ್ದ ಮಡದಿಯ ಮುಂದೆ ತನ್ನ ಹೊಟ್ಟೆ ಹಸಿವು ನೀಗಿಸಿಕೊಳ್ಳಲು ಮ್ಯಾಕ್‌ಡೊನಾಲ್ಡ್ಸ್‌ನಿಂದ ತಂದ ಆಹಾರ ಸೇವಿಸಿದ್ದಾರೆ.
“ಮ್ಯಾಕ್‌ಡೊನಾಲ್ಡ್ಸ್‌ಗೆ ಹೋದ ಆತ ಮರಳಿ ಬಂದು ನನ್ನ ಎದುರು ತಿನ್ನಲು ಮುಂದಾಗಿದ್ದಾನೆ. ತಿಂದ ಬಳಿಕ ನಿರೀಕ್ಷಣಾ ಕೊಠಡಿಯಲ್ಲಿ ಮಲಗಲು ಆತ ಹೋಗಿದ್ದಾನೆ. ನನಗೆ ಸಿ-ಸೆಕ್ಷನ್ ಆದ ಘಳಿಗೆ ನನ್ನ ತಂದೆ ಜೊತೆಯಲ್ಲಿದ್ದರು” ಎಂದು ಸಿಟ್ಟಿಗೆದ್ದ ಪತ್ನಿ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ಘಟನೆ ಬಳಿಕ ತಾವಿಬ್ಬರೂ ಜೊತೆಯಾಗಿ ಬಾಳುತ್ತಿಲ್ಲ ಎಂದು ತಿಳಿಸಿದ ಮಹಿಳೆ, “ನಾನು ಈಗ ಆತನ ಜೊತೆಗೆ ಇಲ್ಲ, ನನ್ನ ಮಗನ ಜನನದ ಘಳಿಗೆಯಲ್ಲಿ ನಾನು ಆತನೊಂದಿಗೆ ಇರಲಿಲ್ಲ. ನಾಲ್ಕು ವರ್ಷಗಳ ಕಾಲ ಜೊತೆಯಲ್ಲಿದ್ದು 14 ತಿಂಗಳು ವೈವಾಹಿಕ ಜೀವನವನ್ನೂ ನಡೆಸಿದ್ದೆವು. ಆತ ನನ್ನನ್ನು ಪ್ರೀತಿಸುತ್ತಿಲ್ಲ ಎಂದು ನನಗೆ ಅರಿವಾದಾಗ ನಾನು ಆರು ತಿಂಗಳ ಗರ್ಭಿಣಿ” ಎಂದು ಹೇಳಿಕೊಂಡಿದ್ದಾರೆ. ಮಹಿಳೆಯ ಈ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಗರ್ಭಿಣಿಯರ ಯಾತನೆ ಅರಿಯಲು ಹೀಗೊಂದು ಪ್ರಯೋಗ ಮಾಡಿದ ಟಿಕ್ ಟಾಕರ್
“ನನ್ನ ಪತಿ ಸಹ ಹೀಗೇ ನೆಲದ ಮೇಲೇ ಮಲಗಿಬಿಟ್ಟಿದ್ದರು. ನನ್ನ ತುರ್ತು ಸಿ-ಸೆಕ್ಷನ್ ಸರ್ಜರಿ ಸಂದರ್ಭದಲ್ಲಿ ವೈದ್ಯರು ಆತನನ್ನು ಎಬ್ಬಿಸಬೇಕಾಯಿತು. ನಿಜ ಹೇಳಬೇಕೆಂದರೆ ಆತ 48 ಗಂಟೆಗಳ ಕಾಲ ನಿದ್ರಿಸಿರಲಿಲ್ಲ” ಎಂದು ನೆಟ್ಟಿಗರೊಬ್ಬರು ಈ ಪೋಸ್ಟ್‌ಗೆ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.