ವಿಡಿಯೋ ನಿರ್ಮಾಣ ಹಾಗೂ ಶೇರ್ ಮಾಡುವ ಅಪ್ಲಿಕೇಶನ್ನಲ್ಲಿ ಅಪ್ರಾಪ್ತೆಯನ್ನ ಪರಿಚಯ ಮಾಡಿಕೊಂಡಿದ್ದ 19 ವರ್ಷದ ಯುವಕ ಆಕೆಯನ್ನ ಅಪಹರಣ ಮಾಡಲು ಹೋಗಿ ಜೈಲುಪಾಲಾದ ಘಟನೆ ದೆಹಲಿಯಲ್ಲಿ ನಡೆದಿದೆ.
ನೆಬ್ ಸರಾಯಿ ಎಂಬ ಗ್ರಾಮಕ್ಕೆ ಸೇರಿದ ವ್ಯಕ್ತಿಯೊಬ್ಬ ತನ್ನ ಕುಟುಂಬಸ್ಥರ ಸಮೇತ ಪೊಲೀಸ್ ಠಾಣೆಗೆ ಆಗಮಿಸಿ ತನ್ನ 15 ವರ್ಷದ ಸಹೋದರಿ ಸೋಮವಾರ ಬೆಳಗ್ಗೆ 7 ಗಂಟೆಯಿಂದ ಮನೆಯಿಂದ ಕಾಣೆಯಾಗಿದ್ದಾಳೆ ಎಂದು ದೂರನ್ನ ನೀಡಿದ್ದರು.
ವಿಚಾರಣೆಯ ವೇಳೆ ಆಕೆಯ ಹಿರಿಯ ಸಹೋದರಿ, ಅಪಹರಣಕ್ಕೊಳಗಾದ ಬಾಲಕಿ ಆಪ್ ಒಂದರಲ್ಲಿ ಪರಿಚಿತನಾದ ಯುವಕನೊಂದಿಗೆ ಸಂಪರ್ಕ ಹೊಂದಿದ್ದಳು ಎಂದು ಹೇಳಿದ್ದಾಳೆ. ಅವರಿಬ್ಬರು ಒಬ್ಬರನ್ನೊಬ್ಬರು ಮುಖತಃ ದೆಹಲಿಯಲ್ಲಿ ಭೇಟಿಯಾಗಿರಲಿಲ್ಲ. ಆತನೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಳು. ಇದಾದ ಬಳಿಕ ಬಾಲಕಿ ಕಾಣೆಯಾದ ಬಗ್ಗೆ ನೆಬ್ ಸರಾಯಿ ಠಾಣೆಯಲ್ಲಿ ಐಪಿಸಿ ಸೆಕ್ಷನ್ 363 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಖ್ಯ ಪೇದೆ ಅಮಿತ್ ಕುಮಾರ್ ನೇತೃತ್ವದಲ್ಲಿ ಪೇದೆ ಸಂದೀಪ್ ಹಾಗೂ ಮನೋಜ್ರನ್ನ ಉತ್ತರ ಪ್ರದೇಶ ಬಿಜನೂರ್ಗೆ ಕಳುಹಿಸಿಕೊಟ್ಟಿತ್ತು. ಅನಿಶಾ ನಂಗ್ಲಿ ಗ್ರಾಮಕ್ಕೆ ತೆರಳಿದ ಪೊಲೀಸರು 19 ವರ್ಷದ ತಂಜೀಲ್ ಅಹಮದ್ನನ್ನ ಬಂಧಿಸಿದ್ದಾರೆ.
ಅಪಹರಣಕ್ಕೊಳಗಾದ ಬಾಲಕಿ 8ನೇ ತರಗತಿ ವಿದ್ಯಾರ್ಥಿನಿಯಾಗಿದ್ದರೆ ಬಂಧಿತ ಆರೋಪಿ ಬಡಗಿಯಾಗಿ ಕೆಲಸ ಮಾಡುತ್ತಿದ್ದ. ಬಾಲಕಿಯನ್ನ ರಕ್ಷಿಸಲಾಗಿದ್ದು ದೆಹಲಿಗೆ ಕರೆತರಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.